Wednesday, September 19, 2007


"ಕಬ್ಬಿಗರ ಕಾವಂ" ಆಂಡಯ್ಯ


ಆಂಡಯ್ಯನ ಬಗ್ಗೆ:


"ಕನ್ನಡದೊಳ್ಪಿನ ನುಡಿಯಂ!
ಮುನ್ನಿನದಱೊಳೆ ನೋಡಿ ತಿಳಿದುಕೊಳ್ವುದು ಚದುರಂ!!
ರನ್ನದ ಕನ್ನಡಿಯಂ ನಲ!
ವಿನ್ನೋಡಿದವಂಗೆ ಕುಂದದೇನಾದಪುದೇ?"


ಎಂದು ದಿಟ್ಟತನದಲಿ, ಸಕ್ಕದವನ್ನು (ಸಂಸ್ಕೃತ ಒರೆಗಳನ್ನು ಬಳಸದೆಯೆ) ಮೆಟ್ಟಿನಿಂತು ಬರಿ ಸಿರಿಗನ್ನಡದಲ್ಲೆ ಮಾಕಬ್ಬವನ್ನು ಬರೆವೆನೆಂದು ಪಣತೊಟ್ಟು ಅದರಂತೆ ನಡೆದು "ಕಾವನ ಗೆಲ್ಲ"ವನ್ನು ನೆಗೞ್ಚಿದ, ಜೊತೆಗೆ ಕನ್ನಡದ ಪೆಂಪನ್ನು ಎಣ್ದೆಸೆಗೂ ಪಸರಿಸಿದ ಕನ್ನಡದ ಹೆಮ್ಮೆಯ ಕಬ್ಬಿಗ, ದಿಮ್ಮಿದರರಸ, ನುಡಿಯೊಳ್ ಕಡುಜಾಣ , ಅಚ್ಚಗನ್ನಡದ ಬೊಮ್ಮನೇ ಆಂಡಯ್ಯ. ಇದು ಸೊತಂತಿರವಾದ ಅಂದರೆ ಹಿಂದಿನ ಯಾವ ಕಬ್ಬದ ಮೇಲೆ ನಿಂಲ್ಲದೆ ಬರಿ ಕಲುಪನೆಯಿಂದ ಮೂಡಿದ ಕಬ್ಬವೆನ್ನುದೊಂದು ಹಿರಿಮೆ ಕೂಡ "ಕಬ್ಬಿಗರ ಕಾವಂ" ವನ್ನು ನೆಗಳ್ಚಿದ ಕಬ್ಬಿಗ ಆಂಡಯ್ಯನು. ಇವನು ತನ್ನ ಅಜ್ಜನನ್ನು "ಲೆಕ್ಕಿಗರ ಪಿರಿಯನೆನಿಪಾಂಡಯ್ಯನು" ಎಂದಿರುವದರಿಂದ ಇವನ ತಾತನ ಹೆಸರೂ ಆಂಡಯ್ಯನೆಂದು ಬಲ್ಲವರು ಬಗೆದಿದ್ದಾರೆ. "ಈ ಹಿರಿಯ ಆಂಡಯ್ಯನು ಒಳ್ಳೆಯ ಸಜ್ಜನನೂ, ಸರಳನೂ" ಎಂದು ತನ್ನ ತಾತನನ್ನು ಹೊಗಳಿದ್ದಾನೆ. ತನ್ನ ಮನೆತನದವರನ್ನು "ದಿಮ್ಮಿದರಕ್ಕರಕ್ಕಱಿವರೊಳ್" ಅಂದರೆ ಬಿದ್ಯೆಯೋಳ್ ಬಲ್ಲಿದರು, "ನುಡಿಯೊಳ್ ಕಡುಜಾಣಾರಂದದೊಳ್! ಪೊಮ್ಮಿದರ್" ಮಾತಿನೊಳು ಬಲುಜಾಣರೂ, ಅಂದದಲ್ಲಿ ಹೆಚ್ಚಿದರೂ ಎಂದಿದ್ದಾನೆ. ಇಂತಹ ಮನೆತದನಲ್ಲಿ ತಮ್ಮ ಸಿರಿತನವನ್ನು "ಪಿರಿಯರ್ಗೆಡೆಕೊಟ್ಟು" ಬಾಳುತಿರಲು, ಆಂಡಯ್ಯ (ಲೆಕ್ಕಿಗರ ಪಿರಿಯ) ನ ಮಕ್ಕಳಾದ ಸಾಂತ, ಗುಮ್ಮಟ ಮತ್ತು ವೈಜಣರಲ್ಲಿ ಹಿರಿಯನಾದವನೂ "ಗರುವಿಕೆಯನಾಂತ"ನಾದ (ಅಂದರೆ ಗೌರವಿತನಾದ) ಸಾಂತನ ಮಗನು ತಾನು "ಲೆಕ್ಕಿಗರರಸ" ಆಂಡಯ್ಯನು ಎಂದು ಹೇಳಿಕೊಂಡಿದ್ದಾನೆ. ಅವನ ಅವ್ವೆಯ ಹೆಸರು ಬಲ್ಲವ್ವೆ.


ಇವನು ತನ್ನಲ್ಲಿ ಜಿನಬಕುತಿ ಉಂಟೆಂದು, ಅದಕ್ಕೆ ಅವನಿಗೆ ಸಹಜ ಸಿರಿ ಒಲಿದುಬಂತೆಂದುಲಿದಿರುವದರಿಂದ ಇವನು ಜಿನನೆನ್ನುವರು. ಇದಕ್ಕೆ ಪುರಾವೆಯಾಗಿ, ಇವನ ಹೆಸರು ಆಂಡಯ್ಯ ಅಂದರೆ ಅಂಡಕ್ಕೆ ಅಯ್ಯ = ಬೊಮ್ಮಯ್ಯ ಎಂದಿರುವುದು. ಈಗಲೂ ಕೂಡ ಜಿನರಲ್ಲಿ ಬೊಮ್ಮಯ್ಯ, ಬರುಮಪ್ಪ ಎಂದು ಕೂಡ ಹೆಸರುಗಳು ಇರುವವು.
ಇಲ್ಲಿವರೆವಿಗೂ ಬಂದ ಪಳೆಗನ್ನಡ ಕಬ್ಬಿಗರೊಬ್ಬರು ಈತನನ್ನು ನೆನೆದಿಲ್ಲವಾದರಿಂದ ಇವನ ಬಗ್ಗೆ ಇನ್ನು ಹೆಚ್ಚು ಅರಿಯಲು ಹೊರಕುರುಹು ಸಿಗುವದಿಲ್ಲ. ಆದ್ದರಿಂದ ಒಳಕುರುಹು ಅಂದರೆ ಇವನ ಕಬ್ಬದಲ್ಲಿ ದೊರೆಯುವುದನ್ನೆ ಬಗೆದು ನೋಡಬೇಕಾಗಿದೆ. ಇವನ ಕಾಲವನ್ನು ನಿಕ್ಕುವವಾಗಿ ಹೇಳಲಾಗದಿದ್ದರೂ, ತನ್ನ ನೆಗಳ್ಚಿನಲ್ಲಿ ಹಳೆಯ ಕಬ್ಬಿಗರಾದ ನೇಮಿನಾಥಪುರಾಣ ಬರೆದ ಕಣ್ಣಮಯ್ಯ (ಕರ್ಣಪಾರ್ಯನೆಂದೂ ಕರೆಯುವರು), ಗಧಾಯುದ್ಧ ಬರೆದ ರನ್ನ (೧೦ನೆಯ ನೂರೇಡಳತೆ), ಜನ್ನ (೧೨ನೆಯ ನೂರೇಡಳತೆ, ಕೇಶಿರಾಜನ ಸೋದರ ಮಾವ), ಗಜಗ (ಈತನ ಬಗ್ಗೆ ತಿಳಿದಿಲ್ಲ) ಮತ್ತು ಬಿನ್ನಣದ ಅಗ್ಗಳರನ್ನು (೧೩ನೆಯ ನೂರೇಡಳತೆಯ ಮೊದಲು) ಕಬ್ಬದ ಮೊದಲಲ್ಲಿ ನೆನೆದಿರುವನು. ಅಲ್ಲದೆ ಕೇಶಿರಾಜನ ತಂದೆಯಾದ ಮಲ್ಲಿಕಾರ್ಜುನನು ತನ್ನ "ಸೂಕ್ತಿಸುಧಾರ್ಣವ"ದಲ್ಲಿ ಇವನ ಪದ್ಯಗಳನ್ನು ಮಾದರಿಯಾಗಿ ತೆಗೆದುಕೊಂಡಿರುವದರಿಂದ ಇವನು ೧೩ನೆಯ ನೂರೇಡಳತೆಯ ಮೊದಲಲ್ಲಿದ್ದನೆಂದು ತಿಳಿಯಬಹುದು.


ಹಿಂದಿನವರಂತೆ ಇವನು ಕಬ್ಬದ ಕೊನೆಯಲ್ಲಿ ತನ್ನ ಗುರು, ಬಿರುದುಗಳನ್ನು ತಿಳಿಸಿಲ್ಲ. ಕನ್ನಡದ ನಾಡಿನ ಬಗ್ಗೆ ಬಣ್ಣಿಸಿದುರಿಂದಲೂ, ಮತ್ತು ೩೪೮ರಲ್ಲಿ "ಗೋಸಣೆ ಮೀಱುವನ್ನಮಿದು ರಾಯನ ನಾಳ್ಕೊಳೊಳಿರ್ಕೆ" ಎಂದಿರುವದರಿಂದಲೂ ದೊರೆಗಳನ್ನು ರಾಯ ಏಂದು ಕರೆಯುವ ಕನ್ನಡದೇಶವೇ ಇವನು ಬಾಳ್ದ ತಾಣವಾಗಿರ್ಪುದು ಎಂದು ದಿಮ್ಮಿದರರಾದ ರಾಮಾನುಜಯ್ಯಂಗಾರ್ಯರು, ಮತ್ತು ನರಸಿಂಹಾಚಾರರು ನುಡಿದಿದ್ದಾರೆ.


ಇವನ ಅಚ್ಚಕನ್ನಡದೊಲವು:


"ಸೊಗಯಿಪ ಸಕ್ಕದಂಬೆರಸಿದಲ್ಲದೆ ಕನ್ನಡದಲ್ಲಿ ಕಬ್ಬಮಂ!
ಬಗೆಗೊಳೆ ಪೇೞಲಾಱರಿನಿತುಂ ಸಲೆ ಮುನ್ನಿನ ಪೆಂಪನಾಳ್ದ ಕ!
ಬ್ಬಿಗರದು ಮಾತನಾಡಿದವೊಲಂದವನಾೞ್ದಿರೆ ಬಲ್ಪು ನೆ!
ಟ್ಟಗೆ ದೊರೆಕೊಂಡುದಿಂತಿವನೊಳಲ್ಲದೆ ಕೇಳ್ ದೊರೆಕೊಳ್ಳದಾರೊಳಂ!!"


ಸಕ್ಕದವಿಲ್ಲದೆ (ಸಂಸ್ಕೃತ ಪದಗಳಿಲ್ಲದೆ) ಅಚ್ಚಕನ್ನಡದಲ್ಲಿ ಕಬ್ಬನೆಗೞ್ಚಲಾರರು ಎಂದು ಕಬ್ಬಿಗರ ಮೇಲೆ ಅಪವಾದ ಬಂದಾಗ,
ಹಿಂದಿನವರಾದ "ಪೆಂಪನಾಳ್ದ" (ಹೆಸರುಮಾಡಿದ, ಪ್ರಸಿದ್ಧರಾದ) ಪಂಪ, ರನ್ನ ಮೊದಲಾದವರು ಸಕ್ಕದದ ನೆರವಿಲ್ಲದೆ ಕನ್ನಡದೊಳ್ ಕಬ್ಬವನ್ನು ನೆಗಳ್ಚಬಲ್ಲರಾದರೂ, ತನ್ನಂತೆ ಎದೆಮುಟ್ಟುವಂತೆ, ಮನಸೂರೆಗೊಳ್ಳುವಂತೆ, ಸೊಗಯಿಸುವ ಕಬ್ಬ ಬರೆಯುವವರಾರಿಲ್ಲವೆಂದು,


"ಎಂದು ತಮತಮಗೆ ಬಲ್ಲವ!
ರೆಂದೊಡೆ ನಾನವರ ಬಯಕೆಯಂ ಸಲಿಸುವೆನಿ!!
ನ್ನೆಂದಚ್ಚಗನ್ನಡಂ ಬಿಗಿ!
ವೊಂದಿರೆ ಕಬ್ಬಿಗರ ಕಾವನೊಲವಿಂದೊರೆದೆಂ!!


ಅದಕ್ಕಾಗಿಯೇ ಅವರ ಬಯಕೆಯನ್ನು ಸಲಿಸಲು, ಕಬ್ಬಿಗರ ಮೇಲೆ ಬಂದ ಅಪವಾದವನ್ನು ಹೋಗಲಾಡಿಸಲು ಪಣತೊಟ್ಟು ತಾನು "ಕಬ್ಬಿಗರ ಕಾವ" ಎಂಬ ಮಾಕಬ್ಬವನ್ನು ಬರೆಯಲೊರೆದೆನು ಎಂದು ಹೇಳಿಕೊಂಡಿರುವನು.
ಕನ್ನಡದೊಲವಿನ ಈ ನೆಗೞ್ಚು "ಕನ್ನಡದೊಳ್ಪಿನ ನುಡಿಯಂ! ಮುನ್ನಿದಱೊಳೆ ನೋಡಿ ತಿಳಿದುಕೊಳ್ವುದು ಚದುರಂ!" ಎಂದು

ಇದೊಂದು ಕನ್ನಡದ ಉಳಿವಿಗೆ ಮಾದರಿಯೆಂದು ಬಗೆವನು.
"ದೋಸದ ಮಾತು ಪೊರ್ದದೆನೆ ಬಲ್ಲವರಗ್ಗದ ಕನ್ನಡಂಗಳಿಂ!
ಬಾಸಣಮಾಗೆ ಪೇೞ್ದನೊಲವಿಂ ನೆಱೆ ಕಬ್ಬಿಗರೊಪ್ಪೆ ನಾಡೆಯುಂ!!
ಗೋಸಣೆ ಮೀಱುವನ್ನಮಿದು ರಾಯನ ನಾೞ್ಕಳೊಳಿರ್ಕೆ ನಿಚ್ಚಮುಂ!
ದೇಸೆಯ ಗೊತ್ತು ಜಾಣ್ಣುಡಿಯ ತಾಯ್ವನೆ ನುಣ್ಬುರುಳೇೞ್ಗೆಯೆಂಬಿನಂ!! (೩೪೮)


ದೋಸ (ದೋಷ)ದ ಮಾತು ಹೊದ್ದು, ಬಲ್ಲವರು ಅಗ್ಗ ಎಂದು ಬಗೆದ ಕನ್ನಡ ಬಾಸಣ(ಭಾಷಣ, ಮಾತು, ನುಡಿ)ದಲ್ಲಿ ಒಲವಿನಿಂ ಪೇೞ್ದ ಈ ಕಬ್ಬ, ನಾಡೊಳು ನೆರೆದ (ಒಟ್ಟಾದ, ಎಲ್ಲ) ಕಬ್ಬಿಗರು ಒಪ್ಪುವಂತೆ, ರಾಯನ (ಕನ್ನಡದ ದೊರೆಯ) ನಾಡುಗಳಲೆಲ್ಲಾ ಮೀರಿ(ಎದ್ದು) ನಿಲ್ಲುವುದಿದು ನಿಚ್ಚಳವು ಎಂದು ಮತ್ತೆ ಮತ್ತೆ ಒತ್ತಿ ಗೋಸಣೆ (ಘೋಷಣೆ) ಮಾಡುವನು. ವಿಲಾಸೆಯ ಗೊತ್ತು, ಜಾಣ್ಣುಡಿಯ ತಾಯಮನೆಯಾಗಿ, ನುಣುಪಾದ ಹೊಳೆವ ಮುತ್ತಿನಂತಾಗಿ (ಒಳ್ಳೆಯ ಆಶೆಯನಿಟ್ಟುಕೊಂಡು) ಮೆರೆವುದೆಂಬೆ ಎಂದು ಸಾರುವನು.
ಇಲ್ಲಿ ಅಗ್ಗ ಎಂದರೆ ಹಿರಿದಾದ ಎಂದೂ ಆಗುವುದರಿಂದ "ಬಲ್ಲವರ ದೋಸ (ದೋಷ)ದ ಮಾತು ಹೊದ್ದು, ಅಗ್ಗವಾದ (ಹಿರಿದಾದ,) ಕನ್ನಡದಲ್ಲಿ ಒಲವಿನಿಂ ಪೇಳ್ದ" ಎಂದೂ ತೋರುವುದು.


ತನ್ನ ಕಬ್ಬದ ಪಿರಿಮೆಗರಿಮೆಗಳ ಹೊಗಳಿಕೆ:


ಕಬ್ಬಿರಕಾವವು ಗದ್ಯ ಪದ್ಯ ಕೂಡಿದ ಒಂದು ಚಂಪೂ ಕಬ್ಬವಾಗಿದೆ. ಇದರ ರಚನೆ ಹಾಗು ಕಬ್ಬದ ಒಳಪುಗಳ ಬಗ್ಗೆ ಆಮೇಲೆ ಬರೆಯುವೆ.
ತನ್ನ ಅಚ್ಚಕನ್ನಡ ಕಬ್ಬಕ್ಕೆ ಇವನಿಗೆ ಎಲ್ಲಿಲ್ಲಿದ ಒಲವು, ಪಿರಿಮೆ, ಕೂರ್ಮೆ. ಮುಂಚಿನ ಕಬ್ಬಿಗರ ಕಬ್ಬಗಳ ಬಲಾಬಲಕ್ಕೆ ಸಮ ತನ್ನ ಕಬ್ಬೆಂದು ಪೇಳುವನು.


"ಒಪ್ಪಂಬೂಸಿದವೋಲ್ ತೆಱಂಬೊಳೆವ ಕೊಂಕುಂ ಪಾಲೊಳೊಂದಿ!
ಲೊಪ್ಪಂಬೆತ್ತಿನಿದಾದ ಬರ್ದುನುಡಿಯುಂ ತಳ್ತೋಜೆಯುಂ ನಿಲ್ವಿನಂ!!
ತಪ್ಪೊಂದುಂ ತಲೆದೊರದಂತೆ ಪಲರೆಲ್ಲರ್ ತಿರ್ದಿದೀಕಬ್ಬಮೆಂ!
ತಪ್ಪಂಗಂ ಪೊಸಮುತ್ತಿನೆಕ್ಕಸರದಂತೆಂದುಂ ಕೊರಲ್ಗೊಳ್ಳದೇ?"


ಅಂದರೆ ಒಪ್ಪವಾಗಿಟ್ಟ ಒಡವೆಯಂತೆ ಹೊಳೆವ ತೆರದಿ ಕೊಂಕು, ಇನಿದಾದ "ಬರ್ದುನುಡಿಯುಂ" ಜಾಣ್ಮೆಯ ನುಡಿಯುಳ್ಳ (ಪ್ರೌಢಿಮೆಯುಳ್ಳ), "ತಳೆದು+ಓಜೆಯಂ" ಗಾಢವಾದ ಪದಪುಂಜರೂಪಗಳನ್ನೊಳಗೊಂಡು "ನಿಲ್ವಿನಂ" ನಿಲ್ಲುವಂತೆಯೂ, ಹಲವಾರು ಸಲ ಎಲ್ಲವನ್ನು ತಿದ್ದಿ ಒಂದಿನಿತು ತಪ್ಪು ತಲೆದೋರದಂತೆ ಇದೆ ಎಂದಲ್ಲದೆ... ಎಂಥವನಿಗೂ ಕೂಡ ಹೊಸ ಮುತ್ತಿನ ಎಕ್ಕಸರದಂತೆ ಕೊರಳೊಳು (ಕಂಠದಲ್ಲಿ ಎಂದು ತಿಳಿಯುವುದು) ಮೆರೆಯದೆ? ಎಂದಿದ್ದಾನೆ.
ಅಲ್ಲದೆ


"ಪುರುಳುಂ ಲಕ್ಕಣಮುಂ ಮೆ!
ಯ್ಸಿರಿಯುಂ ತಳ್ತೆಸೆವ ಪೇೞ್ದ ಕಬ್ಬಮದೆಂತುಂ!
ಪುರುಳುಂ ಲಕ್ಕಣಮುಂ ಮೆ!
ಯ್ಸಿರಿಯುಂ ತಳ್ತೆಸೆವ ರನ್ನದಂತೆರ್ದೆವುಗದೇ?!!"


ಅಂದರೆ ಬಲು ಬೆಲೆಯುಳ್ಳ, ಬಲು ಸೊಗವುಳ್ಳ, ಕಾಂತಿಯಿಂದ ತುಂಬಿರುವ ರನ್ನದಂತೆ, ತನ್ನ ಕಬ್ಬವೂ ಬಲು ಒಳತಿರುಳು ತುಂಬಿದ, ಬಲು ಸೊಗಸಿನದ್ದೂ, ಸೊಬಗಿನದ್ದೂ ಎಂದುಲಿವನು. ಆದುದರಿಂದಲೆ ಇದು ಎಲ್ಲರಿಗೂ ಮೆಚ್ಚಂತೆ.
ತನ್ನ ಸಿಂಗರ ಕಬ್ಬನೆಗೞ್ಚುವ ಬಲದ (ಶೃಂಗಾರ ಕಾವ್ಯ ರಚನಾ ಸಾಮರ್ಥ್ಯ) ಮೇಲೆ ಇವನಿಗೆ ತುಂಬಾ ಬಲುಮೆ.


"ಸೊಗಯಿಸುವ ಕಬ್ಬಮಂ ಕ!
ಬ್ಬಿಗರಲ್ಲದೆ ಮೆಚ್ಚರುೞಿದರೇನಱುವರೆ? ತುಂ!!
ಬಿಗಳಲ್ಲದೆ ಪೂವೊಳ್ ಮಗ!
ಮಗಿಸುವ ಕಂಪಂ ಕಡಂದುಱೀನಱುಪುದೇ?"


ಅಂದರೆ ಹೂವೊಳು ಮಗಮಗಿಸುವ ಸವಿಗಂಪನ್ನು ದುಂಬಿಗಳಲ್ಲದೆ, ಕಣಜದ ಹುಳ ಅರಿಯುವುದೆ?, ಅಂತೆಯೆ ಸೊಗಸೂಸುವ ತನ್ನ ಕಬ್ಬವನ್ನು ಕಬ್ಬಿಗರಲ್ಲದೆ, ಮಿಕ್ಕವರು, ಬೇರೆಯವರು ಮೆಚ್ಚಬಲ್ಲರೆ? ಎಂದು ಕೇಳುವನು.
ಇದಕ್ಕೆ ಸೊಬಗಿನ ಸುಗ್ಗೆ ಎಂಬ ಹೆಸರು ಬರಲು ಕಾರಣವನ್ನು ಹೀಗೆ ಹೇಳಿದ್ದಾನೆ.


"ಪುರುಳುಂ ಲಕ್ಕಣಮುಂ ಮೆ!
ಯ್ಸಿರಿಯುಂ ಮೆಯ್ವೆತ್ತು ಸೋಲಿಪುದಱಿಂದೊಲ್ದ!!
ಕ್ಕರಿಗರಿದನೋದಿ ಪೊಸತಾ!
ಗಿರೆ ಸೊಬಗಿನ ಸುಗ್ಗಿಯೆಂಬ ಪೆಸರಂ ಕೊಟ್ಟರ್ !!


ಅಂದರೆ ಒಳತಿರುಳು ತುಂಬಿದ, ಬಲು ಸೊಗಸಿನ (ಲಕ್ಷಣವಾದ), ಸೊಬಗಿನ ಐಸಿರಿಯನ್ನು ಮೈವೆತ್ತ ಈ ಕಬ್ಬಕ್ಕೆ ಸೋತು, ಒಲಿದು ಓದಿ ಹೊಸಬಗೆಯ ಈ ಕಬ್ಬಕ್ಕೆ ಬಲ್ಲವರು ಮೆಚ್ಚಿ ಸೊಬಗಿನ ಸುಗ್ಗೆ ಎಂದು ಹೆಸರು ಕೊಟ್ಟರಂತೆ.


"ಮತ್ತಂ ಸಕ್ಕದಮಱಿವರ್!
ಬಿತ್ತರದಿಂ ಮದನವಿಜಯಮೆಂದೊಲವೆರ್ದೆಯಂ!!
ಪತ್ತಿರೆ ಪೆಸರಿಟ್ಟರಿದ!
ಕ್ಕತ್ತಳವೆನಿಪುದೆನೆ ಮಿಸುಪ ಪೆಸರೆಸೆವಿನೆಗಂ!!"


ಸಕ್ಕದಬಲ್ಲರು ಇದನ್ನೊದಿ, ಸಕ್ಕದದಿ ಮಾತ್ರವೇ (ಕಲ್ಪನೆಯಿಂದ ಬರೆಯುವುದು ಸಕ್ಕದದಲ್ಲಿ ಮಾತ್ರ) ಕಾಣುವ ಈ ತೆರದ ಕಬ್ಬವು ಕನ್ನಡದಲಿ ಬರೆದುದಕ್ಕೆ, ಮೆಚ್ಚಿ, ಒಲವಿಂದ ಎದೆತುಂಬಿ ಹರಸಿ ಈ ಕಬ್ಬ "ಮದನ ವಿಜಯ" ಎಂದು ಕರೆದರೆ ಅದು ಅತ್ತಳವೇ (ಅತಿಶಯವೇ) ಎಂದು ಕೇಳುವನು


ಇದಕ್ಕೆ"ಕಾವನ ಗೆಲ್ಲ" ಎಂದೂ ಕೂಡ ಕರೆವರು......


(ಮುಂದುವರಿಯುವುದು...)


- ವಿನಾಯಕ. ಖವಾಸಿ



ಒರೆಗಳ ತಿಳಿವು:
ಕಬ್ಬ : ಕಾವ್ಯ (ಮಾಕಬ್ಬ : ಮಹಾಕಾವ್ಯ)
ಎಣ್ದೆಸೆಗೂ : ಎಂಟು ದಿಕ್ಕುಗಳಿಗೂ
ಸಕ್ಕದ : ಸಂಸ್ಕೃತ
ಸೊತಂತಿರ : ಸ್ವತಂತ್ರವಾದ
ಕಲುಪನೆ : ಕಲ್ಪನೆ
ದಿಮ್ಮಿದರ : ವಿದ್ದ್ಯೆಯಲ್ಲಿ ಬಲ್ಲವರು, ಜ್ಞಾನಿಗಳು, ಪ್ರೌಢರು
ನೆಗೞ್ಚು : ರಚಿಸು
ಲೆಕ್ಕಿಗ : ಗಣಿತಜ್ಞ, ಇಲ್ಲಿ ವಿದ್ವಾಂಸ ಅಂತು ತಿಳಿಯುವುದು, ಕುಲಕರ್ಣಿ, ಶಾನುಭೋಗರು ಎಂದೂ ಹೇಳುವರು
ಗರುವಿಕೆ : ಗೌರವಿತ
ಗೋಸಣೆ : ಘೋಷಣೆ
ನಾಳ್ಕೊಳು : ದೇಶದಲ್ಲಿ, ನಾಡಿನಲ್ಲಿ,
ದೋಸ : ದೋಷ
ಬಲ್ಲವರು : ಜಾಣರು, ಗೆಳೆಯರೂ ಎನ್ನಬಹುದು
ಬಾಸಣ : ಭಾಷಣ, ಮಾತು, ನುಡಿ
ಮೀರಿ : ಎದ್ದು ನಿಲ್ಲು
ಗೋಸಣೆ : ಘೋಷಣೆ.
ನುಣ್ಬುರುಳೇೞ್ಗೆ : ನುಣುಪಾದ ಹೊಳೆವ ಮುತ್ತ, ಒಳ್ಳೆಯ ಆಶೆಯನಿಟ್ಟುಕೊಂಡು ಎಂದು ತಿಳಿಯಬೇಕು
ತೆಱಂಬೊಳೆ : ತೆರನಾಗಿ ಹೊಳೆಯುವುದು, ಅಂತೆ ಹೊಳೆಯುವುದು
ಬರ್ದುನುಡಿ : ಪ್ರೌಢೋಕ್ತಿ,
ತಳ್ತೋಜೆಯುಂ : ಗಾಢವಾದ ಪದನ್ಯಾಸವುಳ್ಳ ಪ್ರೌಢಿಮೆಯಿಂದ ಕೂಡಿದ
ನಿಲ್ವಿನಂ : ನಿಂತಿರಲು
ಎಕ್ಕಸರ : ಏಕಾವಳಿ, ಒಂದೇದಾರದಲ್ಲಿ ಪೋಣಿಸಿದ ಮಾಲೆ
ಪುರುಳುಂ : ಬೆಲೆಯುಳ್ಳ, ಒಳತಿರುಳು ತುಂಬಿದ, ಅರ್ಥಗಾಂಭೀರ್ಯವುಳ್ಳ
ಲಕ್ಕಣಮುಂ : ಲಕ್ಷಣವಾದ, ಸೊಗಸಾದ, ಉತ್ತಮವಾದ ಕಾವ್ಯ ಲಕ್ಷಣವುಳ್ಳ
ತಳ್ತೆಸೆವ : ಮನಮೋಹಕವಾದ
ಕಡಂದುೞು : ಕಣಜದ ಹುಳು
ಅತ್ತಳವೆನಿಪು : ಅತಿಶವೆನಿಸು

ನೆರವಾದ ಹೊತ್ತಿಗೆಗಳು:
1) "ಕಬ್ಬಿಗರ ಕಾವಂ" – ಮಂ ಆ ರಾಮಾನುಜಯ್ಯಂಗಾರರು ಮತ್ತು ಮಂ ಆಜಿ ನರಸಿಂಹಾಚಾರ್ಯರು, 1930
2) "ಅಚ್ಚಗನ್ನಡ ನುಡಿಕೋಶ" – ವಿದ್ವಾನ್ ಕೊಳಂಬೆ ಪುಟ್ಟಣ್ಣ ಗೌಡರು, 1993