Wednesday, September 19, 2007


"ಕಬ್ಬಿಗರ ಕಾವಂ" ಆಂಡಯ್ಯ


ಆಂಡಯ್ಯನ ಬಗ್ಗೆ:


"ಕನ್ನಡದೊಳ್ಪಿನ ನುಡಿಯಂ!
ಮುನ್ನಿನದಱೊಳೆ ನೋಡಿ ತಿಳಿದುಕೊಳ್ವುದು ಚದುರಂ!!
ರನ್ನದ ಕನ್ನಡಿಯಂ ನಲ!
ವಿನ್ನೋಡಿದವಂಗೆ ಕುಂದದೇನಾದಪುದೇ?"


ಎಂದು ದಿಟ್ಟತನದಲಿ, ಸಕ್ಕದವನ್ನು (ಸಂಸ್ಕೃತ ಒರೆಗಳನ್ನು ಬಳಸದೆಯೆ) ಮೆಟ್ಟಿನಿಂತು ಬರಿ ಸಿರಿಗನ್ನಡದಲ್ಲೆ ಮಾಕಬ್ಬವನ್ನು ಬರೆವೆನೆಂದು ಪಣತೊಟ್ಟು ಅದರಂತೆ ನಡೆದು "ಕಾವನ ಗೆಲ್ಲ"ವನ್ನು ನೆಗೞ್ಚಿದ, ಜೊತೆಗೆ ಕನ್ನಡದ ಪೆಂಪನ್ನು ಎಣ್ದೆಸೆಗೂ ಪಸರಿಸಿದ ಕನ್ನಡದ ಹೆಮ್ಮೆಯ ಕಬ್ಬಿಗ, ದಿಮ್ಮಿದರರಸ, ನುಡಿಯೊಳ್ ಕಡುಜಾಣ , ಅಚ್ಚಗನ್ನಡದ ಬೊಮ್ಮನೇ ಆಂಡಯ್ಯ. ಇದು ಸೊತಂತಿರವಾದ ಅಂದರೆ ಹಿಂದಿನ ಯಾವ ಕಬ್ಬದ ಮೇಲೆ ನಿಂಲ್ಲದೆ ಬರಿ ಕಲುಪನೆಯಿಂದ ಮೂಡಿದ ಕಬ್ಬವೆನ್ನುದೊಂದು ಹಿರಿಮೆ ಕೂಡ "ಕಬ್ಬಿಗರ ಕಾವಂ" ವನ್ನು ನೆಗಳ್ಚಿದ ಕಬ್ಬಿಗ ಆಂಡಯ್ಯನು. ಇವನು ತನ್ನ ಅಜ್ಜನನ್ನು "ಲೆಕ್ಕಿಗರ ಪಿರಿಯನೆನಿಪಾಂಡಯ್ಯನು" ಎಂದಿರುವದರಿಂದ ಇವನ ತಾತನ ಹೆಸರೂ ಆಂಡಯ್ಯನೆಂದು ಬಲ್ಲವರು ಬಗೆದಿದ್ದಾರೆ. "ಈ ಹಿರಿಯ ಆಂಡಯ್ಯನು ಒಳ್ಳೆಯ ಸಜ್ಜನನೂ, ಸರಳನೂ" ಎಂದು ತನ್ನ ತಾತನನ್ನು ಹೊಗಳಿದ್ದಾನೆ. ತನ್ನ ಮನೆತನದವರನ್ನು "ದಿಮ್ಮಿದರಕ್ಕರಕ್ಕಱಿವರೊಳ್" ಅಂದರೆ ಬಿದ್ಯೆಯೋಳ್ ಬಲ್ಲಿದರು, "ನುಡಿಯೊಳ್ ಕಡುಜಾಣಾರಂದದೊಳ್! ಪೊಮ್ಮಿದರ್" ಮಾತಿನೊಳು ಬಲುಜಾಣರೂ, ಅಂದದಲ್ಲಿ ಹೆಚ್ಚಿದರೂ ಎಂದಿದ್ದಾನೆ. ಇಂತಹ ಮನೆತದನಲ್ಲಿ ತಮ್ಮ ಸಿರಿತನವನ್ನು "ಪಿರಿಯರ್ಗೆಡೆಕೊಟ್ಟು" ಬಾಳುತಿರಲು, ಆಂಡಯ್ಯ (ಲೆಕ್ಕಿಗರ ಪಿರಿಯ) ನ ಮಕ್ಕಳಾದ ಸಾಂತ, ಗುಮ್ಮಟ ಮತ್ತು ವೈಜಣರಲ್ಲಿ ಹಿರಿಯನಾದವನೂ "ಗರುವಿಕೆಯನಾಂತ"ನಾದ (ಅಂದರೆ ಗೌರವಿತನಾದ) ಸಾಂತನ ಮಗನು ತಾನು "ಲೆಕ್ಕಿಗರರಸ" ಆಂಡಯ್ಯನು ಎಂದು ಹೇಳಿಕೊಂಡಿದ್ದಾನೆ. ಅವನ ಅವ್ವೆಯ ಹೆಸರು ಬಲ್ಲವ್ವೆ.


ಇವನು ತನ್ನಲ್ಲಿ ಜಿನಬಕುತಿ ಉಂಟೆಂದು, ಅದಕ್ಕೆ ಅವನಿಗೆ ಸಹಜ ಸಿರಿ ಒಲಿದುಬಂತೆಂದುಲಿದಿರುವದರಿಂದ ಇವನು ಜಿನನೆನ್ನುವರು. ಇದಕ್ಕೆ ಪುರಾವೆಯಾಗಿ, ಇವನ ಹೆಸರು ಆಂಡಯ್ಯ ಅಂದರೆ ಅಂಡಕ್ಕೆ ಅಯ್ಯ = ಬೊಮ್ಮಯ್ಯ ಎಂದಿರುವುದು. ಈಗಲೂ ಕೂಡ ಜಿನರಲ್ಲಿ ಬೊಮ್ಮಯ್ಯ, ಬರುಮಪ್ಪ ಎಂದು ಕೂಡ ಹೆಸರುಗಳು ಇರುವವು.
ಇಲ್ಲಿವರೆವಿಗೂ ಬಂದ ಪಳೆಗನ್ನಡ ಕಬ್ಬಿಗರೊಬ್ಬರು ಈತನನ್ನು ನೆನೆದಿಲ್ಲವಾದರಿಂದ ಇವನ ಬಗ್ಗೆ ಇನ್ನು ಹೆಚ್ಚು ಅರಿಯಲು ಹೊರಕುರುಹು ಸಿಗುವದಿಲ್ಲ. ಆದ್ದರಿಂದ ಒಳಕುರುಹು ಅಂದರೆ ಇವನ ಕಬ್ಬದಲ್ಲಿ ದೊರೆಯುವುದನ್ನೆ ಬಗೆದು ನೋಡಬೇಕಾಗಿದೆ. ಇವನ ಕಾಲವನ್ನು ನಿಕ್ಕುವವಾಗಿ ಹೇಳಲಾಗದಿದ್ದರೂ, ತನ್ನ ನೆಗಳ್ಚಿನಲ್ಲಿ ಹಳೆಯ ಕಬ್ಬಿಗರಾದ ನೇಮಿನಾಥಪುರಾಣ ಬರೆದ ಕಣ್ಣಮಯ್ಯ (ಕರ್ಣಪಾರ್ಯನೆಂದೂ ಕರೆಯುವರು), ಗಧಾಯುದ್ಧ ಬರೆದ ರನ್ನ (೧೦ನೆಯ ನೂರೇಡಳತೆ), ಜನ್ನ (೧೨ನೆಯ ನೂರೇಡಳತೆ, ಕೇಶಿರಾಜನ ಸೋದರ ಮಾವ), ಗಜಗ (ಈತನ ಬಗ್ಗೆ ತಿಳಿದಿಲ್ಲ) ಮತ್ತು ಬಿನ್ನಣದ ಅಗ್ಗಳರನ್ನು (೧೩ನೆಯ ನೂರೇಡಳತೆಯ ಮೊದಲು) ಕಬ್ಬದ ಮೊದಲಲ್ಲಿ ನೆನೆದಿರುವನು. ಅಲ್ಲದೆ ಕೇಶಿರಾಜನ ತಂದೆಯಾದ ಮಲ್ಲಿಕಾರ್ಜುನನು ತನ್ನ "ಸೂಕ್ತಿಸುಧಾರ್ಣವ"ದಲ್ಲಿ ಇವನ ಪದ್ಯಗಳನ್ನು ಮಾದರಿಯಾಗಿ ತೆಗೆದುಕೊಂಡಿರುವದರಿಂದ ಇವನು ೧೩ನೆಯ ನೂರೇಡಳತೆಯ ಮೊದಲಲ್ಲಿದ್ದನೆಂದು ತಿಳಿಯಬಹುದು.


ಹಿಂದಿನವರಂತೆ ಇವನು ಕಬ್ಬದ ಕೊನೆಯಲ್ಲಿ ತನ್ನ ಗುರು, ಬಿರುದುಗಳನ್ನು ತಿಳಿಸಿಲ್ಲ. ಕನ್ನಡದ ನಾಡಿನ ಬಗ್ಗೆ ಬಣ್ಣಿಸಿದುರಿಂದಲೂ, ಮತ್ತು ೩೪೮ರಲ್ಲಿ "ಗೋಸಣೆ ಮೀಱುವನ್ನಮಿದು ರಾಯನ ನಾಳ್ಕೊಳೊಳಿರ್ಕೆ" ಎಂದಿರುವದರಿಂದಲೂ ದೊರೆಗಳನ್ನು ರಾಯ ಏಂದು ಕರೆಯುವ ಕನ್ನಡದೇಶವೇ ಇವನು ಬಾಳ್ದ ತಾಣವಾಗಿರ್ಪುದು ಎಂದು ದಿಮ್ಮಿದರರಾದ ರಾಮಾನುಜಯ್ಯಂಗಾರ್ಯರು, ಮತ್ತು ನರಸಿಂಹಾಚಾರರು ನುಡಿದಿದ್ದಾರೆ.


ಇವನ ಅಚ್ಚಕನ್ನಡದೊಲವು:


"ಸೊಗಯಿಪ ಸಕ್ಕದಂಬೆರಸಿದಲ್ಲದೆ ಕನ್ನಡದಲ್ಲಿ ಕಬ್ಬಮಂ!
ಬಗೆಗೊಳೆ ಪೇೞಲಾಱರಿನಿತುಂ ಸಲೆ ಮುನ್ನಿನ ಪೆಂಪನಾಳ್ದ ಕ!
ಬ್ಬಿಗರದು ಮಾತನಾಡಿದವೊಲಂದವನಾೞ್ದಿರೆ ಬಲ್ಪು ನೆ!
ಟ್ಟಗೆ ದೊರೆಕೊಂಡುದಿಂತಿವನೊಳಲ್ಲದೆ ಕೇಳ್ ದೊರೆಕೊಳ್ಳದಾರೊಳಂ!!"


ಸಕ್ಕದವಿಲ್ಲದೆ (ಸಂಸ್ಕೃತ ಪದಗಳಿಲ್ಲದೆ) ಅಚ್ಚಕನ್ನಡದಲ್ಲಿ ಕಬ್ಬನೆಗೞ್ಚಲಾರರು ಎಂದು ಕಬ್ಬಿಗರ ಮೇಲೆ ಅಪವಾದ ಬಂದಾಗ,
ಹಿಂದಿನವರಾದ "ಪೆಂಪನಾಳ್ದ" (ಹೆಸರುಮಾಡಿದ, ಪ್ರಸಿದ್ಧರಾದ) ಪಂಪ, ರನ್ನ ಮೊದಲಾದವರು ಸಕ್ಕದದ ನೆರವಿಲ್ಲದೆ ಕನ್ನಡದೊಳ್ ಕಬ್ಬವನ್ನು ನೆಗಳ್ಚಬಲ್ಲರಾದರೂ, ತನ್ನಂತೆ ಎದೆಮುಟ್ಟುವಂತೆ, ಮನಸೂರೆಗೊಳ್ಳುವಂತೆ, ಸೊಗಯಿಸುವ ಕಬ್ಬ ಬರೆಯುವವರಾರಿಲ್ಲವೆಂದು,


"ಎಂದು ತಮತಮಗೆ ಬಲ್ಲವ!
ರೆಂದೊಡೆ ನಾನವರ ಬಯಕೆಯಂ ಸಲಿಸುವೆನಿ!!
ನ್ನೆಂದಚ್ಚಗನ್ನಡಂ ಬಿಗಿ!
ವೊಂದಿರೆ ಕಬ್ಬಿಗರ ಕಾವನೊಲವಿಂದೊರೆದೆಂ!!


ಅದಕ್ಕಾಗಿಯೇ ಅವರ ಬಯಕೆಯನ್ನು ಸಲಿಸಲು, ಕಬ್ಬಿಗರ ಮೇಲೆ ಬಂದ ಅಪವಾದವನ್ನು ಹೋಗಲಾಡಿಸಲು ಪಣತೊಟ್ಟು ತಾನು "ಕಬ್ಬಿಗರ ಕಾವ" ಎಂಬ ಮಾಕಬ್ಬವನ್ನು ಬರೆಯಲೊರೆದೆನು ಎಂದು ಹೇಳಿಕೊಂಡಿರುವನು.
ಕನ್ನಡದೊಲವಿನ ಈ ನೆಗೞ್ಚು "ಕನ್ನಡದೊಳ್ಪಿನ ನುಡಿಯಂ! ಮುನ್ನಿದಱೊಳೆ ನೋಡಿ ತಿಳಿದುಕೊಳ್ವುದು ಚದುರಂ!" ಎಂದು

ಇದೊಂದು ಕನ್ನಡದ ಉಳಿವಿಗೆ ಮಾದರಿಯೆಂದು ಬಗೆವನು.
"ದೋಸದ ಮಾತು ಪೊರ್ದದೆನೆ ಬಲ್ಲವರಗ್ಗದ ಕನ್ನಡಂಗಳಿಂ!
ಬಾಸಣಮಾಗೆ ಪೇೞ್ದನೊಲವಿಂ ನೆಱೆ ಕಬ್ಬಿಗರೊಪ್ಪೆ ನಾಡೆಯುಂ!!
ಗೋಸಣೆ ಮೀಱುವನ್ನಮಿದು ರಾಯನ ನಾೞ್ಕಳೊಳಿರ್ಕೆ ನಿಚ್ಚಮುಂ!
ದೇಸೆಯ ಗೊತ್ತು ಜಾಣ್ಣುಡಿಯ ತಾಯ್ವನೆ ನುಣ್ಬುರುಳೇೞ್ಗೆಯೆಂಬಿನಂ!! (೩೪೮)


ದೋಸ (ದೋಷ)ದ ಮಾತು ಹೊದ್ದು, ಬಲ್ಲವರು ಅಗ್ಗ ಎಂದು ಬಗೆದ ಕನ್ನಡ ಬಾಸಣ(ಭಾಷಣ, ಮಾತು, ನುಡಿ)ದಲ್ಲಿ ಒಲವಿನಿಂ ಪೇೞ್ದ ಈ ಕಬ್ಬ, ನಾಡೊಳು ನೆರೆದ (ಒಟ್ಟಾದ, ಎಲ್ಲ) ಕಬ್ಬಿಗರು ಒಪ್ಪುವಂತೆ, ರಾಯನ (ಕನ್ನಡದ ದೊರೆಯ) ನಾಡುಗಳಲೆಲ್ಲಾ ಮೀರಿ(ಎದ್ದು) ನಿಲ್ಲುವುದಿದು ನಿಚ್ಚಳವು ಎಂದು ಮತ್ತೆ ಮತ್ತೆ ಒತ್ತಿ ಗೋಸಣೆ (ಘೋಷಣೆ) ಮಾಡುವನು. ವಿಲಾಸೆಯ ಗೊತ್ತು, ಜಾಣ್ಣುಡಿಯ ತಾಯಮನೆಯಾಗಿ, ನುಣುಪಾದ ಹೊಳೆವ ಮುತ್ತಿನಂತಾಗಿ (ಒಳ್ಳೆಯ ಆಶೆಯನಿಟ್ಟುಕೊಂಡು) ಮೆರೆವುದೆಂಬೆ ಎಂದು ಸಾರುವನು.
ಇಲ್ಲಿ ಅಗ್ಗ ಎಂದರೆ ಹಿರಿದಾದ ಎಂದೂ ಆಗುವುದರಿಂದ "ಬಲ್ಲವರ ದೋಸ (ದೋಷ)ದ ಮಾತು ಹೊದ್ದು, ಅಗ್ಗವಾದ (ಹಿರಿದಾದ,) ಕನ್ನಡದಲ್ಲಿ ಒಲವಿನಿಂ ಪೇಳ್ದ" ಎಂದೂ ತೋರುವುದು.


ತನ್ನ ಕಬ್ಬದ ಪಿರಿಮೆಗರಿಮೆಗಳ ಹೊಗಳಿಕೆ:


ಕಬ್ಬಿರಕಾವವು ಗದ್ಯ ಪದ್ಯ ಕೂಡಿದ ಒಂದು ಚಂಪೂ ಕಬ್ಬವಾಗಿದೆ. ಇದರ ರಚನೆ ಹಾಗು ಕಬ್ಬದ ಒಳಪುಗಳ ಬಗ್ಗೆ ಆಮೇಲೆ ಬರೆಯುವೆ.
ತನ್ನ ಅಚ್ಚಕನ್ನಡ ಕಬ್ಬಕ್ಕೆ ಇವನಿಗೆ ಎಲ್ಲಿಲ್ಲಿದ ಒಲವು, ಪಿರಿಮೆ, ಕೂರ್ಮೆ. ಮುಂಚಿನ ಕಬ್ಬಿಗರ ಕಬ್ಬಗಳ ಬಲಾಬಲಕ್ಕೆ ಸಮ ತನ್ನ ಕಬ್ಬೆಂದು ಪೇಳುವನು.


"ಒಪ್ಪಂಬೂಸಿದವೋಲ್ ತೆಱಂಬೊಳೆವ ಕೊಂಕುಂ ಪಾಲೊಳೊಂದಿ!
ಲೊಪ್ಪಂಬೆತ್ತಿನಿದಾದ ಬರ್ದುನುಡಿಯುಂ ತಳ್ತೋಜೆಯುಂ ನಿಲ್ವಿನಂ!!
ತಪ್ಪೊಂದುಂ ತಲೆದೊರದಂತೆ ಪಲರೆಲ್ಲರ್ ತಿರ್ದಿದೀಕಬ್ಬಮೆಂ!
ತಪ್ಪಂಗಂ ಪೊಸಮುತ್ತಿನೆಕ್ಕಸರದಂತೆಂದುಂ ಕೊರಲ್ಗೊಳ್ಳದೇ?"


ಅಂದರೆ ಒಪ್ಪವಾಗಿಟ್ಟ ಒಡವೆಯಂತೆ ಹೊಳೆವ ತೆರದಿ ಕೊಂಕು, ಇನಿದಾದ "ಬರ್ದುನುಡಿಯುಂ" ಜಾಣ್ಮೆಯ ನುಡಿಯುಳ್ಳ (ಪ್ರೌಢಿಮೆಯುಳ್ಳ), "ತಳೆದು+ಓಜೆಯಂ" ಗಾಢವಾದ ಪದಪುಂಜರೂಪಗಳನ್ನೊಳಗೊಂಡು "ನಿಲ್ವಿನಂ" ನಿಲ್ಲುವಂತೆಯೂ, ಹಲವಾರು ಸಲ ಎಲ್ಲವನ್ನು ತಿದ್ದಿ ಒಂದಿನಿತು ತಪ್ಪು ತಲೆದೋರದಂತೆ ಇದೆ ಎಂದಲ್ಲದೆ... ಎಂಥವನಿಗೂ ಕೂಡ ಹೊಸ ಮುತ್ತಿನ ಎಕ್ಕಸರದಂತೆ ಕೊರಳೊಳು (ಕಂಠದಲ್ಲಿ ಎಂದು ತಿಳಿಯುವುದು) ಮೆರೆಯದೆ? ಎಂದಿದ್ದಾನೆ.
ಅಲ್ಲದೆ


"ಪುರುಳುಂ ಲಕ್ಕಣಮುಂ ಮೆ!
ಯ್ಸಿರಿಯುಂ ತಳ್ತೆಸೆವ ಪೇೞ್ದ ಕಬ್ಬಮದೆಂತುಂ!
ಪುರುಳುಂ ಲಕ್ಕಣಮುಂ ಮೆ!
ಯ್ಸಿರಿಯುಂ ತಳ್ತೆಸೆವ ರನ್ನದಂತೆರ್ದೆವುಗದೇ?!!"


ಅಂದರೆ ಬಲು ಬೆಲೆಯುಳ್ಳ, ಬಲು ಸೊಗವುಳ್ಳ, ಕಾಂತಿಯಿಂದ ತುಂಬಿರುವ ರನ್ನದಂತೆ, ತನ್ನ ಕಬ್ಬವೂ ಬಲು ಒಳತಿರುಳು ತುಂಬಿದ, ಬಲು ಸೊಗಸಿನದ್ದೂ, ಸೊಬಗಿನದ್ದೂ ಎಂದುಲಿವನು. ಆದುದರಿಂದಲೆ ಇದು ಎಲ್ಲರಿಗೂ ಮೆಚ್ಚಂತೆ.
ತನ್ನ ಸಿಂಗರ ಕಬ್ಬನೆಗೞ್ಚುವ ಬಲದ (ಶೃಂಗಾರ ಕಾವ್ಯ ರಚನಾ ಸಾಮರ್ಥ್ಯ) ಮೇಲೆ ಇವನಿಗೆ ತುಂಬಾ ಬಲುಮೆ.


"ಸೊಗಯಿಸುವ ಕಬ್ಬಮಂ ಕ!
ಬ್ಬಿಗರಲ್ಲದೆ ಮೆಚ್ಚರುೞಿದರೇನಱುವರೆ? ತುಂ!!
ಬಿಗಳಲ್ಲದೆ ಪೂವೊಳ್ ಮಗ!
ಮಗಿಸುವ ಕಂಪಂ ಕಡಂದುಱೀನಱುಪುದೇ?"


ಅಂದರೆ ಹೂವೊಳು ಮಗಮಗಿಸುವ ಸವಿಗಂಪನ್ನು ದುಂಬಿಗಳಲ್ಲದೆ, ಕಣಜದ ಹುಳ ಅರಿಯುವುದೆ?, ಅಂತೆಯೆ ಸೊಗಸೂಸುವ ತನ್ನ ಕಬ್ಬವನ್ನು ಕಬ್ಬಿಗರಲ್ಲದೆ, ಮಿಕ್ಕವರು, ಬೇರೆಯವರು ಮೆಚ್ಚಬಲ್ಲರೆ? ಎಂದು ಕೇಳುವನು.
ಇದಕ್ಕೆ ಸೊಬಗಿನ ಸುಗ್ಗೆ ಎಂಬ ಹೆಸರು ಬರಲು ಕಾರಣವನ್ನು ಹೀಗೆ ಹೇಳಿದ್ದಾನೆ.


"ಪುರುಳುಂ ಲಕ್ಕಣಮುಂ ಮೆ!
ಯ್ಸಿರಿಯುಂ ಮೆಯ್ವೆತ್ತು ಸೋಲಿಪುದಱಿಂದೊಲ್ದ!!
ಕ್ಕರಿಗರಿದನೋದಿ ಪೊಸತಾ!
ಗಿರೆ ಸೊಬಗಿನ ಸುಗ್ಗಿಯೆಂಬ ಪೆಸರಂ ಕೊಟ್ಟರ್ !!


ಅಂದರೆ ಒಳತಿರುಳು ತುಂಬಿದ, ಬಲು ಸೊಗಸಿನ (ಲಕ್ಷಣವಾದ), ಸೊಬಗಿನ ಐಸಿರಿಯನ್ನು ಮೈವೆತ್ತ ಈ ಕಬ್ಬಕ್ಕೆ ಸೋತು, ಒಲಿದು ಓದಿ ಹೊಸಬಗೆಯ ಈ ಕಬ್ಬಕ್ಕೆ ಬಲ್ಲವರು ಮೆಚ್ಚಿ ಸೊಬಗಿನ ಸುಗ್ಗೆ ಎಂದು ಹೆಸರು ಕೊಟ್ಟರಂತೆ.


"ಮತ್ತಂ ಸಕ್ಕದಮಱಿವರ್!
ಬಿತ್ತರದಿಂ ಮದನವಿಜಯಮೆಂದೊಲವೆರ್ದೆಯಂ!!
ಪತ್ತಿರೆ ಪೆಸರಿಟ್ಟರಿದ!
ಕ್ಕತ್ತಳವೆನಿಪುದೆನೆ ಮಿಸುಪ ಪೆಸರೆಸೆವಿನೆಗಂ!!"


ಸಕ್ಕದಬಲ್ಲರು ಇದನ್ನೊದಿ, ಸಕ್ಕದದಿ ಮಾತ್ರವೇ (ಕಲ್ಪನೆಯಿಂದ ಬರೆಯುವುದು ಸಕ್ಕದದಲ್ಲಿ ಮಾತ್ರ) ಕಾಣುವ ಈ ತೆರದ ಕಬ್ಬವು ಕನ್ನಡದಲಿ ಬರೆದುದಕ್ಕೆ, ಮೆಚ್ಚಿ, ಒಲವಿಂದ ಎದೆತುಂಬಿ ಹರಸಿ ಈ ಕಬ್ಬ "ಮದನ ವಿಜಯ" ಎಂದು ಕರೆದರೆ ಅದು ಅತ್ತಳವೇ (ಅತಿಶಯವೇ) ಎಂದು ಕೇಳುವನು


ಇದಕ್ಕೆ"ಕಾವನ ಗೆಲ್ಲ" ಎಂದೂ ಕೂಡ ಕರೆವರು......


(ಮುಂದುವರಿಯುವುದು...)


- ವಿನಾಯಕ. ಖವಾಸಿ



ಒರೆಗಳ ತಿಳಿವು:
ಕಬ್ಬ : ಕಾವ್ಯ (ಮಾಕಬ್ಬ : ಮಹಾಕಾವ್ಯ)
ಎಣ್ದೆಸೆಗೂ : ಎಂಟು ದಿಕ್ಕುಗಳಿಗೂ
ಸಕ್ಕದ : ಸಂಸ್ಕೃತ
ಸೊತಂತಿರ : ಸ್ವತಂತ್ರವಾದ
ಕಲುಪನೆ : ಕಲ್ಪನೆ
ದಿಮ್ಮಿದರ : ವಿದ್ದ್ಯೆಯಲ್ಲಿ ಬಲ್ಲವರು, ಜ್ಞಾನಿಗಳು, ಪ್ರೌಢರು
ನೆಗೞ್ಚು : ರಚಿಸು
ಲೆಕ್ಕಿಗ : ಗಣಿತಜ್ಞ, ಇಲ್ಲಿ ವಿದ್ವಾಂಸ ಅಂತು ತಿಳಿಯುವುದು, ಕುಲಕರ್ಣಿ, ಶಾನುಭೋಗರು ಎಂದೂ ಹೇಳುವರು
ಗರುವಿಕೆ : ಗೌರವಿತ
ಗೋಸಣೆ : ಘೋಷಣೆ
ನಾಳ್ಕೊಳು : ದೇಶದಲ್ಲಿ, ನಾಡಿನಲ್ಲಿ,
ದೋಸ : ದೋಷ
ಬಲ್ಲವರು : ಜಾಣರು, ಗೆಳೆಯರೂ ಎನ್ನಬಹುದು
ಬಾಸಣ : ಭಾಷಣ, ಮಾತು, ನುಡಿ
ಮೀರಿ : ಎದ್ದು ನಿಲ್ಲು
ಗೋಸಣೆ : ಘೋಷಣೆ.
ನುಣ್ಬುರುಳೇೞ್ಗೆ : ನುಣುಪಾದ ಹೊಳೆವ ಮುತ್ತ, ಒಳ್ಳೆಯ ಆಶೆಯನಿಟ್ಟುಕೊಂಡು ಎಂದು ತಿಳಿಯಬೇಕು
ತೆಱಂಬೊಳೆ : ತೆರನಾಗಿ ಹೊಳೆಯುವುದು, ಅಂತೆ ಹೊಳೆಯುವುದು
ಬರ್ದುನುಡಿ : ಪ್ರೌಢೋಕ್ತಿ,
ತಳ್ತೋಜೆಯುಂ : ಗಾಢವಾದ ಪದನ್ಯಾಸವುಳ್ಳ ಪ್ರೌಢಿಮೆಯಿಂದ ಕೂಡಿದ
ನಿಲ್ವಿನಂ : ನಿಂತಿರಲು
ಎಕ್ಕಸರ : ಏಕಾವಳಿ, ಒಂದೇದಾರದಲ್ಲಿ ಪೋಣಿಸಿದ ಮಾಲೆ
ಪುರುಳುಂ : ಬೆಲೆಯುಳ್ಳ, ಒಳತಿರುಳು ತುಂಬಿದ, ಅರ್ಥಗಾಂಭೀರ್ಯವುಳ್ಳ
ಲಕ್ಕಣಮುಂ : ಲಕ್ಷಣವಾದ, ಸೊಗಸಾದ, ಉತ್ತಮವಾದ ಕಾವ್ಯ ಲಕ್ಷಣವುಳ್ಳ
ತಳ್ತೆಸೆವ : ಮನಮೋಹಕವಾದ
ಕಡಂದುೞು : ಕಣಜದ ಹುಳು
ಅತ್ತಳವೆನಿಪು : ಅತಿಶವೆನಿಸು

ನೆರವಾದ ಹೊತ್ತಿಗೆಗಳು:
1) "ಕಬ್ಬಿಗರ ಕಾವಂ" – ಮಂ ಆ ರಾಮಾನುಜಯ್ಯಂಗಾರರು ಮತ್ತು ಮಂ ಆಜಿ ನರಸಿಂಹಾಚಾರ್ಯರು, 1930
2) "ಅಚ್ಚಗನ್ನಡ ನುಡಿಕೋಶ" – ವಿದ್ವಾನ್ ಕೊಳಂಬೆ ಪುಟ್ಟಣ್ಣ ಗೌಡರು, 1993

Friday, August 17, 2007

ಮಿಂಬಲೆ, ಎಣಿ, ಗೆಯ್ತರುವಾಯಿ

ಹಲವು ನಾಳುಗಳಿಂದ ಈ ಕಂಪ್ಯೂಟರ್‍ ನಂಟಾದ ಒರೆಗಳಿಗೆ ಅಚ್ಚಗನ್ನಡದಲ್ಲಿ ಒರೆಗಳನ್ನು ಹುಟ್ಟಿಸಬೇಕು, ಕಂಡು ಹುಡಿಯಬೇಕು ಎಂದು ಹಂಬಲಿಸಿ, ಕೊನೆಗೆ ಒಂದು ಪಟ್ಟಿ ಅಣಿಯಾಯಿತು..

ಒರೆವುಟ್ಟಿನ ಹಿಂದಿನ ಹುರುಳನ್ನು ಬಳಿಕ ಹೇಳುವೆನು. ಕಂಡುಹಿಡಿಯುವವರು ಮೊದಲು ಒಂದು ಕೈ ನೋಡಲಿ!

computer = ಎಣಿ/ಎಣೆ
laptop = ಮಡಿಲೆಣಿ, ಚಿಕ್ಕೆಣಿ, ತೊಡೆಯೆಣಿ
super computer = ಹಿರಿಯೆಣಿ, ದೊಡ್ಡೆಣಿ, ಹೆರೆಣಿ
Keyboard = ಅಚ್ಚುಮೆಣೆ
mouse = ಮವುಸು
Monitor = ತೋರುಗೆ/ತೋರುಣಿ
speaker = ಸದ್ದುಪೆಟ್ಟಿಗೆ

program = ಗೆಯ್ತರುವಾಯಿ
excecute/run = ಓಡಿಸು, ನಡೆಸು
Install = ನೆಲೆಸು, ನೆಲೆಯಿಸು
uninstall = ನೆಲೆತೆರವು

electricity = ಮಿನ್ನಾರ/ಮಿನ್ನಾರ್ಪು/ಮಿಂಚಾರ್ಪು.
electric = ಮಿನ್ನಾರ್ಪಿನ
electronic = ಮಿನ್ಮೆ, ಮಿನ್ಕೆ
e-mail = ಮಿನ್ನೋಲೆ
e-network/internet/e-web = ಮಿಂಬಲೆ
e-site/web-site = ಮಿನ್ನೆಲೆ, ಮಿನ್ನಿಕ್ಕೆ, ಮಿಂದಾಣ

image = ಪಾಪೆ/ಹಾಹೆ
video = ವಿಡಿಯೊ
audio = ಅಡಿಯೊ

ಇನ್ನೂ ಸೇರಿಸೋಣ.. ಅಚ್ಚಗನ್ನಡಿಗರೇ ಕೊಡುಗೆ ನೀಡಿ

Tuesday, August 14, 2007

ಕನ್ನಡ ನಾಡಿನ ಕಬ್ಬಿಗರು -೧ ( ನಯಸೇನ)

ನಯಸೇನ ( ಕ್ರಿ.ನೂ.1112 )

ಈತ ಜಿನ ಕಬ್ಬಿಗ. 'ಧರಮಾಮ್ರುತ' ಈತನ ನೆಗೞ್ಚು. ಬೇಕರನದ ಬಗ್ಗೆ ಕೂಡ ಬರೆದಿದ್ದಾನೆ. ಈತನ ಕಬ್ಬದಲ್ಲಿ ' ಮುಳುಗುಂದದೊಳಿರ್ದು.." ಇರುವುದರಿಂದ ಇವನು ಮುಳುಗುಂದದಲ್ಲಿ ಇದ್ದನೆಂದು ತಿಳಿಯಬಹುದು. ಕೆಳಗೆ ಕೊಟ್ಟಿರುವ ಸಾಲುಗಳಿಂದ ತಿಳಿಯುವುದೇನೆಂದರೆ ಈತನ ಹೊತ್ತಿನಲ್ಲಿಯೇ ಕಬ್ಬಿಗರು ಬೇಡದೇ ಇರುವ ಸಕ್ಕದದ ಒರೆಗಳನ್ನು ಬಳಸುತ್ತಿದ್ದರೆಂದು ತಿಳಿಯುತ್ತದೆ.


೧) ಪೊಸಗನ್ನಡದಿಂ ವ್ಯಾವ
ರ್ಣಿಸುವೆಂ ಸತ್ಕೃತಿಯನೆಂದು ಕನ್ನಡಮಂ ಚಿಂ
ತಿಸಿ ಕೂಡಲಾಱದಕ್ಕಟ
ಮಿಸುಕದ ಸಕ್ಕದಮನಿಕ್ಕುವವನುಂ ಕವಿಯೇ
ತಿಳಿವು: ಕನ್ನಡ ಕಬ್ಬಗಳನ್ನು ಬರೆಯಲು ತೊಡಗಿದರೆ ಅದರಲ್ಲೇ ಬರೆಯಬೇಕು. ಸಕ್ಕದ ಒರೆಗಳನ್ನು ತುಮ್ಬುವುದು ತಪ್ಪು, ಹಾಗೆ ಬರೆದವನನ್ನು ಕಬ್ಬಿಗ ಎನ್ನಬಹುದೇ?


೨) ಸಕ್ಕದಮಂ ಪೇೞ್ವೊಡೆ ನೆಱೆ
ಸಕ್ಕದಮಂ ಪೇೞ್ಗೆ ಸುದ್ದಗನ್ನಡದೊಳ್ ತಂ
ದಿಕ್ಕುವುದೇ ಸಕ್ಕದಮಂ
ತಕ್ಕುದೆ ಬೆರಸಲ್ಕೆ ಘೃತಮುಮಂ ತೈಲಮಂ


ತಿಳಿವು: ಸಕ್ಕದದಲ್ಲಿ ಹೇಳಬೇಕಾದುದನ್ನ ಸಕ್ಕದದಲ್ಲಿ ಹೇಳಿ/ಬರೆಯಿರಿ/ನೆಗೞ್ಚಿ, ಅದರ ಬದಲು ಸಕ್ಕದವನ್ನು ಕನ್ನಡದ ಕಬ್ಬದಲ್ಲಿ ತಂದಿಕ್ಕಿದರೆ ಎಣ್ಣೆಗೆ ತುಪ್ಪ ಬೆರೆಸಿದಂತಾಗುತ್ತದೆ. ಎಂದೂ ಹೊಂದಲ್ಲ.

ಎಡರೊರೆಗಳ ತಿಳಿವು

ಘೃತ - ತುಪ್ಪ
ತೈಲ - ಎಣ್ಣೆ

Tuesday, August 7, 2007

ಅಚ್ಚಗನ್ನಡ ಹಾರೈಕೆಗಳು

ಅಚ್ಚಗನ್ನಡ ಹಾರೈಕೆಗಳು
Welcome/ಸುಸ್ವಾಗತ = ನಲ್ವರಂ, ನಲ್ವರುವು, ಚಂಬರಂ, ಚಂಬರುವು
Good Bye = ನಲ್ದೆರಳು, ಚಂದೆರಳು, ಸಿಗೋಣ, ಸಿಗುಮ, ಸಿಗೋಣು.

Greetings/ಅಭಿನಂದನೆ = ಹಾರೈಕೆ
Hello/ನಮಸ್ಕಾರ = ತುಳಿಲು
Thanks/ಧನ್ಯವಾದ = ನನ್ನಿ

Good Morning/ಶುಭೋದಯ = ನಲ್ವಗಲು, ನಲ್ವೆಳಗು, ಚೆಂಬಗಲು, ಚೆಂಬೆಳಗು, ಚೆಮ್ಮೂಡು
Good Night/ಶುಭರಾತ್ರಿ = ನಲ್ಲಿರುಳು, ನಲ್ಮಬ್ಬು, ಚನ್ನಿರುಳು, ಚಮ್ಮಬ್ಬು
Good Day/ಶುಭದಿನ = ನಲ್ನಾಳು, ಚನ್ನಾಳು
Good Evening = ನಲ್ಸಂಜೆ, ಚಂಚಂಜೆ.
Good After noon = ನಲ್ನಡುವಗಲು
Good Time = ನಲ್ವೊತ್ತು, ಚಂಬೊತ್ತು

Happy Birth Day = ನಲಿವಿನ ಹುಟ್ಟು ಹಬ್ಬ
Birth day wishes = ಹುಟ್ಟು ಹಬ್ಬದ ನಲಿವಾರೈಕೆ
Happy new year = ಹೊಸತೇಡಿನ ನಲಿವಾರೈಕೆ
Happy Deepavali = ನಲಿ ದೀವಳಿಗೆ
Happy Dasara = ನಲಿ ದಸರೆ
Happy Yugadi = ನಲಿವುಗಾದಿ

Best of luck = ಕೆಲಸ ಗಿಟ್ಟಲಿ/ದಕ್ಕಲಿ




Monday, July 30, 2007

ಅಚ್ಚ-ಕನ್ನಡ ಬರಹಗಾರರು

*ನೆರವಿಗಾಗಿ ಬರಹದ ಕೊನೆ ನೋಡಿರಿ
ಅಚ್ಚ-ಕನ್ನಡ ಬರಹಗಾರರು

ಈವರೆಗೆ ನಮಗೆ ಗೊತ್ತಿರುವ ಅಚ್ಚ-ಕನ್ನಡದ ಬರಹಗಾರರು ( ಅಂದರೆ ಬರೀ ಅಚ್ಚ-ಕನ್ನಡದಲ್ಲಿ ಬರೆದಿರುವವರು)
  1. ಆಂಡಯ್ಯ
  2. ಮುಳಿಯ ತಿಮ್ಮಪ್ಪಯ್ಯನವರು
  3. ಕೊಳಂಬೆ ಪುಟ್ಟಣ್ಣಗೌಡರು

ಆಂಡಯ್ಯ ( ೧೩ನೇ ನೂರೇಡು )

ಇವರು ಬರೆದಿರುವ 'ಕಬ್ಬಿಗರ ಕಾವನ್' ಅಚ್ಚ-ಕನ್ನಡದಲ್ಲಿ ಬಂದ ಮೊದಲನೆಯ ಕಬ್ಬ. ಇಲ್ಲಿ ಬರೀ ಅಚ್ಚ-ಕನ್ನಡ ಸದ್ದುಗಳನ್ನೇ ಇಲ್ಲವೆ ತದ್ಬವಗಳನ್ನು ಬಳಸಿ ಕಬ್ಬವನ್ನು ನೆಗೞ್ಚದ್ದಾರೆ.

ಆಂಡಯ್ಯನ ಅಜ್ಜನ ಹೆಸರು ಕೂಡ ಆಂಡಯ್ಯ. ಆಂಡಯ್ಯನ ಮಕ್ಕಳಾದ ಸಾಂತ, ಗುಮ್ಮಟ ಮತ್ತು ವೈಜಣರಲ್ಲಿ ಹಿರಿಯವನಾದ ಸಾಂತನ ಮಗನೆ ಆಂಡಯ್ಯ. ಈತನ ತಾಯಿ ಬಲ್ಲವ್ವೆ. ಇವನು ಹುಟ್ಟು-ಜಿನಿಗ.

ಇವನು ಪಂಪ, ರನ್ನ, ಅಗ್ಗಳ ಮತ್ತು ಜನ್ನನನ್ನು ತನ್ನ ಕಬ್ಬದಲ್ಲಿ ಹೊಗಳಿರುತ್ತಾನೆ. ಈತನಿಗೆ ಯಾವ ಅರಸನು ಇಂಬು ನೀಡಲಿಲ್ಲ.

ಸಕ್ಕದದ ನೆರವಿಲ್ಲದೆ ಕನ್ನಡದಲ್ಲಿ ಕಬ್ಬವನ್ನು ನೆಗೞ್ಚಲಾಗದೆಂದು ಆದುದರಿಂದಲೇ ಪಂಪ ಮೊದಲಾದ ಹೆಸರಾಂತ ಕಬ್ಬಿಗರು ಕನ್ನಡ-ಸಕ್ಕದ ಬೆರೆಸಿ ಕಬ್ಬವನ್ನು ಬರೆದರಂತೆ. ಇದನ್ನು ಕೆಲವರು ಹೀಗಳೆದರು. ಆಗ ಬರೀ ಕನ್ನಡದ ಒರೆಗಳನ್ನೇ ಬಳಸಿ ಕಬ್ಬವನ್ನು ಬರೆಯಬಹುದೆಂದು ತೋರಿಸಲು ಆಂಡಯ್ಯ 'ಕಬ್ಬಿಗರ ಕಾವನ್' ಬರೆದನೆಂದು ಹೇಳಲಾಗಿದೆ.

ಇದರಿಂದ 'ಬಲ್ಲವರು' ಇವನಿಗೆ 'ಕಬ್ಬಿಗರ ಕಾವ' ಅಂದ್ರೆ ಕಬ್ಬಿಗರನ್ನು ಕಾಪಾಡಿದವನು(Saviour of Poets) ಎಂಬ ಬಿರುದನ್ನು ಕೊಟ್ಟರು. ಇದಕ್ಕೆ 'ಕಾವನ ಗೆಲ್ಲ', ' ಸೊಬಗಿನ ಸುಗ್ಗಿ' ಎಂಬ ಹೆಸರುಗಳು ಕೂಡ ಇದೆ.

ಮಾದರಿ:
  1. ಎಳಗಿಳಿವಿಂಡು, ಮಿಳಿರ್ದಾಡುವ ಪೆಂಡಿರ ನೋಟ,
    ಪೂವಿನ ಪೊಸಗಂಪಿನೊಳ್
    ಪೊರೆದು ತೀಡುವ ತೆಂಬಲರ್
  2. ಸೊಗಯಿಸುವ ಕಬ್ಬಮಂ ಕ
    ಬ್ಬಿಗರಲ್ಲದೆ ಮೆಚ್ಚರುಱಿದರೇನಱುವರೆ? ತುಂ
    ಬಿಗಳಲ್ಲದೆ ಪೂವೊಳ್ ಮಗ
    ಮಗಿಸುವ ಕಂಪಂ ಕಡಂದುಱೋನಱುದಪುದೇ

ತಿಳಿವು/ತಿರುಳು: ಹೂವಿನ ಮಗಮಗಿಸುವ ಕಂಪು ಹೇಗೆ ಬರೀ ದುಂಬಿಗೆ ಗೊತ್ತೊ ಹಾಗೆ ಈ ನನ್ನ ಕಬ್ಬವನ್ನು ಸೊಗಸಾದ ಕಬ್ಬಿಗರಲ್ಲದೆ ಬೇರೆ ಯಾರು ಮೆಚ್ಚಲಾರರು.

ಮುಳಿಯ ತಿಮ್ಮಪ್ಪಯ್ಯನವರು ( ಸುಮಾರು ೧೯೦೦)

ಮುಳಿಯ ತಿಮ್ಮಪ್ಪಯ್ಯನವರು 'ಸೊಬಗಿನ ಬಳ್ಳಿ' ಎಂಬ ಕಬ್ಬವನ್ನು ತಿಳಿಗನ್ನಡದಲ್ಲಿ ನೆಗೞ್ಚಿದರು. ಅವರು 'ಕವಿರಾಜಮಾರ್ಗ ವಿವೇಕ' ಎಂಬ ಹೊತ್ತಿಗೆಯನ್ನು ಬೆಳಕಿಗೆ ತಂದರು. ಇದು ಕನ್ನಡದ ಹೆಮ್ಮೆಯ ರಟ್ಟಕೂಟ/ರಾಶ್ಟ್ರಕೂಟರು ಮತ್ತು 'ಕವಿರಾಜಮಾರ್ಗ'ದ ಬಗೆಗಿನ ತಿಳಿವೊಳಗೊಂಡ ಬರಹ.ಇವರು ಮಂಗಳೂರಿನ ಸಂತ ಅಲೋಸಿಯಸ್ ಕಾಲೇಜಿನಲ್ಲಿ ಕಲ್ಲಾಯ್ತರಾಗಿದ್ದವರು. ಇವರ ಬಗೆಗೆ ಹೆಚ್ಚಿನ ತಿಳಿವು ಸಿಕ್ಕಿಲ್ಲ.

ಕೊಳಂಬೆ ಪುಟ್ಟಣ್ಣಗೌಡರು.(ಕುವೆಂಪು ಹೊತ್ತಿನವರು)

ಕೊಳಂಬೆ ಪುಟ್ಟಣ್ಣಗೌಡರು 'ಕಾಲೂರ ಚೆಲುವೆ'ಎಂಬ ಅಚ್ಚ-ಕನ್ನಡ ಕಬ್ಬದಿಂದ ಹೆಸರುವಾಸಿಯಾದರು. ಆಂಡಯ್ಯನನ್ನು ಮರೆತವರಿಗೆ ಪುಟ್ಟಣ್ಣಗೌಡರು ಆತನನ್ನು,ಅತನ ಕಬ್ಬವನ್ನು ನೆನೆಯುವಂತೆ ಮಾಡಿದರು. ಆಂಡಯ್ಯನು ತನ್ನ ಕಬ್ಬದಲ್ಲಿ ಅಚ್ಚ-ಕನ್ನಡ ಒರೆಗಳು ಮತ್ತು ತದ್ಬವಗಳನ್ನು ಬಳಸಿದ್ದಾನೆ, ಆದರೆ ಪುಟ್ಟಣ್ಣನವರು ಒಂದು ಹೆಜ್ಜೆ ಮುಂದೆ ಹೋಗಿ ಬರೀ ಅಚ್ಚ-ಕನ್ನಡದ ಒರೆಗಳನ್ನೇ ಬಳಸಿದ್ದಾರೆ. ಇವರು ನಮ್ಮ 'ನಾಡಕಬ್ಬಿಗ'ರಾದ ಕುವೆಂಪುರವರ ಬೀಗರು ಮತ್ತು ಚಿದಾನಂದಗೌಡರ ತಂದೆ. ಇವರು ಮೊದಲ್ಗಬ್ಬಿಗ/ಆದಿಕವಿ ನಾಡೋಜ ಪಂಪನ ಕಬ್ಬಗಳನ್ನು, ಕೇಶಿರಾಜನ 'ಶಬ್ದಮಣಿದರ್ಪಣ'ವನ್ನು ಚೆನ್ನಾಗಿ ಕಲಿತಿದ್ದರು. ಇವರು ಹೊಸ ಅಚ್ಚ-ಕನ್ನಡ ಸದ್ದುಗಳನ್ನು/ಒರೆಗಳನ್ನು ಬಳಕೆಗೆ ತಂದರು.
ಮಾದರಿ : ಬಾನೋಡ(ವಿಮಾನ), ಮೇಲ್ನಲ(ಸ್ವರ್ಗ), ಬೆಟ್ಟಳಿಯ(ಶಿವ), ಮಬ್ಬಿಗ(ರಾಕ್ಶಸ), ಏರ್ವಣಿ(ಕುರ್ಚಿ), ನುಡಿವುರುಳು(ಶಬ್ದಸಂಪತ್ತು), ಕಲ್ಲಾಯ್ತ(ಉಪಾಧ್ಯಾಯ)

ಎಲ್ಲಬಲ್ಲಪ್ಪನ(ಸರ್ವ್ಞನ)ವಚನಗಳ ಮಾದರಿಯಲ್ಲಿ 'ತಿಳಿಗನ್ನಡ ನುಡಿವಣಿ'ಗಳನ್ನು ನೆಗೞ್ಚಿದರು.

ಒಂದು ಮಾದರಿ:
ನಾಡೆಂದರೇಂ ಹುಗಿದಿಟ್ಟ ಬಾಳ್ಪುರುಳಂತೆ
ಹೊತ್ತೆಲ್ಲರೆಚ್ಚರದಿಂ ಕಾವುದಂತೆ
ತಿಳಿವಾಳ್ಕೆ ದುಡಿಮೆಗಳ್ ತಡೆವುವು ಹಗೆಗಳಂ
ಹೊಳೆ ಬೆಟ್ಟ ಕಡಲುಗಳ್ ತಡೆಯಲ್ಲವಂತೆ

ತಿಳಿವು/ತಿರುಳು: ನಾಡೆಂದರೆ ಹುಗಿದಿಟ್ಟ ಬಾಳಿನ ಸಿರಿಯಂತೆ, ಅದನ್ನು ಎಚ್ಚರದಿಂದ ಕಾಪಾಡಬೇಕು. ಹಗೆಗಳಿಗೆ ಹೊಳೆ,ಬೆಟ್ಟ ಮತ್ತು ಕಡಲುಗಳು ತಡೆಗಳಲ್ಲ. ನಾಡಿನ ಅರಿವು, ಆಳುವಿಕೆ ಮತ್ತು ಬೆವರು ಹರಿಸಿದ ದುಡಿಮೆಗಳೇ ತಡೆಗಳು.

ಇನಿತಿಗೆ ತಮ್ಮ ದುಡಿಮೆಯನ್ನು ಕೊನೆಗೊಳಿಸದೇ ಒಂದು ಹೆಜ್ಜೆ ಮುಂದೆ ಹೋಗಿ 'ಅಚ್ಚಗನ್ನಡ ನುಡಿಗಂಟ'ನ್ನು ಕೂಡ ಬೆಳಕಿಗೆ ತಂದರು. ಇಂದಿಗೂ ಅಚ್ಚ-ಕನ್ನಡ ಒರೆಗಳ ತಿಳಿವಳಿಕೆಗೆ ಇದು ದಾರಿದೀವಿಗೆಯಾಗಿದೆ.

ಒರೆಗಳ ತಿಳಿವು

ಒರೆ = ಪದ
ನೂರೇಡು = ಶತಮಾನ ( ಏಡು = ವರುಷ )
ನೆಗೞ್ಚು= ರಚಿಸು
ಹುಟ್ಟು-ಜಿನಿಗ=a jain by birth, ( ಜಿನಿಗ = a jain man )
ಕಲ್ಲಾಯ್ತ = ಉಪಾಧ್ಯಾಯ
ನುಡಿಗಂಟು = ಶಬ್ದಕೋಶ = dictionary
ನುಡಿವಣಿ = ನುಡಿಮಣಿಗಳು
ನಾಡಕಬ್ಬಿಗ= ರಾಷ್ಟ್ರಕವಿ

Friday, July 20, 2007

ಕನ್ನಡದಲ್ಲಿ 'ಇಸು'ವಿನ ಬಳಕೆ

ಕನ್ನಡದಲ್ಲಿ 'ಇಸು'ವಿನ ಬಳಕೆ

ಕನ್ನಡದಲ್ಲಿ 'ಇಸು' ವಿನ ಬಳಕೆ ಹೀಗಿದೆ,

ಮಾಡು - ತಾನು ಮಾಡುವುದು.
ಮಾದರಿ: ಅವನು ಕೆಲಸ ಮಾಡಿದನು

ಮಾಡಿಸು - ಎರಡನೆಯವನು ಮಾಡುವಂತೆ ಮಾಡುವುದು.
ಮಾದರಿ: ಅವನು ತಿಮ್ಮನಿಂದ ಮಾಡಿಸಿದನು

ಮಾಡಿಸಿಸು - ಎರಡನೆಯವನು ಮೂರನೆಯವರಿಂದ ಮಾಡಿಸುವಂತೆ ಮಾಡುವುದು.
ಮಾದರಿ: ಅವನು ತಿಮ್ಮನಿಗೆ ಹೇಳಿ, ನಿಂಗನಿಂದ ಮಾಡಿಸಿಸಿದನು

ಇದರಿಂದ ನಮಗೆ ಮೂರು ಹೆಸರುಪದಳು ಸಿಗುತ್ತವೆ. ಮಾಡುವಿಕೆ,ಮಾಡಿಸುವಿಕೆ,ಮಾಡಿಸಿಸುವಿಕೆ.

ಹಾಗೆಯೇ,
ಕೇಳು, ಕೇಳಿಸು, ಕೇಳಿಸಿಸು
ತೋರು, ತೋರಿಸು, ತೋರಿಸಿಸು
ಹಾಡು, ಹಾಡಿಸು, ಹಾಡಿಸಿಸು
ಮಾರ್ಪಡು, ಮಾರ್ಪಡಿಸು, ಮಾರ್ಪಡಿಸಿಸು
'ಪ್ರಶ್ನೆ' ಈ ಒರೆಯು ಸಕ್ಕದದ 'ಪ್ರಶ್ನಾ' ದಿಂದ ಬಂದದ್ದು. ಇದಕ್ಕೆ ಇಸು ಸೇರಿಸಿ 'ಪ್ರಶ್ನಿಸು' ಮಾಡಿದ್ದೇವೆ.
ಕೇಳು - ಪ್ರಶ್ನೆ ಮಾಡು - ಪ್ರಶ್ನಿಸು
ಕೇಳಿಸು - ಪ್ರಶ್ನಿಸಿಸು.
ಕೇಳಿಸಿಸು - ?
ಹೀಗೆ ಸಕ್ಕದದ ಒರೆಗಳಿಗೆ 'ಇಸು' ಸೇರಿಸಿ ಕನ್ನಡಕ್ಕೆ ತರುವುದಿಂದ ಕನ್ನಡದಲ್ಲಿ ಹಲವು ಗೊಂದಲಗಳು ಆಗಿವೆ. ಅದಕ್ಕಾಗಿ ಆದನಿತ್ತು ಕಡಮೆ ಇಂತಹ ಒರೆಗಳನ್ನು ಬಳಸಬೇಕು.

Thursday, July 19, 2007

ಅಚ್ಚ-ಕನ್ನಡದಲ್ಲಿ ಒರೆಗೂಡಿಕೆ ಕಟ್ಟಳೆಗಳು

*ಓದಲು ನೆರವಿಗೆ ಬರಹದ ಕೊನೆ ನೋಡಿರಿ

ಅಚ್ಚ-ಕನ್ನಡದಲ್ಲಿ ಒರೆಗೂಡಿಕೆ ಕಟ್ಟಳೆಗಳು

ಒರೆಗೂಡಿಕೆ ಅಂದರೆ ಎರಡು ಒರೆಗಳನ್ನು ಕೂಡಿಸಿ/ಸೇರಿಸಿ ಉಲಿಯುವ ಕೆಲಸ. ಹೀಗೆ ಒರೆಗಳನ್ನು ಕೂಡಿಸಿದಾಗ ಕೆಲವು ಮಾರ್ಪಾಟುಗಳ ಆಗುವುವು.

ಈ ಒರೆಗೂಡಿಕೆಯನ್ನು ಮುನ್ನೊರೆಯು ಯಾವ ಅಕ್ಕರದಿಂದ ಕೊನೆಯಾಗುವುದು, ಮತ್ತು ಹಿನ್ನೊರೆಯು ಯಾವ ಅಕ್ಕರದಿಂದ ಮೊದಲಾಗುವುದು ಎನ್ನುವುದರ ಮೇಲೆ
೧) ಸೊರಗೂಡಿಕೆ - ಎರಡು ಸೊರಗಳು ಕೂಡುವುದು
೨) ಬೆಂಜಣಗೂಡಿಕೆ - ಎರಡು ಬೆಂಜಣಗಳು ಕೂಡುವುದು
ಎಂದು ಎರಡು ಬಗೆ ಮಾಡಬಹುದು.

ಸೊರಗೂಡಿಕೆ
ಕನ್ನಡದಲ್ಲಿ ಯಾವಾಗಲೂ ಒರೆಗೂಡಿಕೆಯಲ್ಲಿ ಮೊನ್ನೊರೆಯ ಕೊನೆಯ ಸೊರ ಕಾಣೆಯಾಗುವುದು.

ಅಂದು + ಎನಗೆ = ಅಂದೆನಗೆ
ಈಗ + ಈಗ = ಈಗೀಗ
ಅಲ್ಲಿ + ಅಲ್ಲಿ = ಅಲ್ಲಲ್ಲಿ
ಇಲ್ಲಿ + ಇಲ್ಲಿ = ಇಲ್ಲಿಲ್ಲಿ

ಹೆಸರೊರೆಗಳು ಸೇರಿಸುವಾಗ ಮೊದಲು ಹೆಸರೊರೆಯನ್ನು ಒಂದನೇ ವಿಬಕುತಿಗೆ ತಂದು ಬಳಿಕ ಸೇರಿಸ ಬೇಕು.

ನಿಂಗ => ನಿಂಗನು/ನಿಂಗರು
ನಿಂಗರು + ಅಲ್ಲಿ = ನಿಂಗರಲ್ಲಿ
ನಿಂಗನು + ಇಂದ = ನಿಂಗನಿಂದ

ಹೊಳೆ => ಹೊಳೆಯು/ಹೊಳೆಗಳು
ಹೊಳೆಯು + ಈಗ = ಹೊಳೆಯೀಗ
ಹೊಳೆಯು + ಅಂದು = ಹೊಳೆಯಂದು

ಹೀಗೆ. ( ತಪ್ಪುಗಳಿದ್ದರೆ ತಿಳಿಸಿರಿ )

ಬೆಂಜಣ ಕೂಡಿಕೆ
ಮುನ್ನೊರೆಯ ಕೊನೆಯಲ್ಲಿ, ಮತ್ತು ಹಿನ್ನೊರೆಯ ತುದಿಯಲ್ಲಿರುವ ಬೆಂಜಣಗಳ ಕೂಡಿಕೆ.

ಕಟ್ಟಳೆಗಳು
ಕ => ಗ,
ಹುರಿ + ಕಡಬು = ಹುರಿಗಡಬು
ಕೆನ್ + ಕಣ್ಣು = ಕೆಂಗಣ್ಣು ( ಇಲ್ಲಿ ನ್ => ೦ ಆಯಿತು )

ತ => ದ,
ಪುಲಿ + ತೊಗಲು = ಪುಲಿದೊಗಲು
ಕೆನ್ + ತಾವರೆ = ಕೆಂದಾವರೆ
ಬೆಟ್ಟ + ತಾವರೆ = ಬೆಟ್ಟದಾವರೆ

ಪ => ಬ,
ಎಣ್ + ಪತ್ತು = ಎಂಬತ್ತು ( ಣ್ => ೦ )
ತೊಂ + ಪತ್ತು = ತೊಂಬತ್ತು

ಪ,ಬ,ಮ => ವ
ನುಡಿ + ಮಣಿ = ನುಡಿವಣಿ
ಮುಂದು + ಪರಿ = ಮುಂದುವರಿ
ನನೆ + ಬಿಲ್ಲ = ನನೆವಿಲ್ಲ

ಸ => ಚ
ಇನ್ + ಸರ = ಇಂಚರ

ಡ => ೞ
ಮಾಡ್ + ಪುದು => ಮಾೞ್ಪುದು
ನೋಡ್ + ಪುದು => ನೋೞ್ಪುದು

=====================================================
ಒರೆ = ಪದ, word
ಒರೆಗೂಡಿಕೆ = ಪದಸಂಧಿ
ಹೆಸರೊರೆ = ನಾಮಪದ, noun
ಕೆಲಸದೊರೆ = ಕ್ರಿಯಾಪದ, verb
ಮಾರ್ಪು/ಮಾರ್ಪಾಟು = ಬದಲಾವಣೆ, ವ್ಯತ್ಯಾಸ
ಉಲಿ, ನುಡಿ, ಸೊಲ್ಲು = pronounce, ಉಚ್ಚಾರ ಮಾಡು
ಮೊನ್ನೊರೆ( ಮುನ್ + ಒರೆ ) = ಮುಂದಿನ ಒರೆ
ಹಿನ್ನೊರೆ ( ಹಿನ್ + ಒರೆ ) = ಹಿಂದಿನ ಒರೆ
ಸೊರ = ಸ್ವರ
ಅಕ್ಕರ = ಅಕ್ಷರ
ವಿಬಕುತಿ = ವಿಭಕ್ತಿ
ಬೆಂಜಣ = ವ್ಯಂಜನ