Monday, July 30, 2007

ಅಚ್ಚ-ಕನ್ನಡ ಬರಹಗಾರರು

*ನೆರವಿಗಾಗಿ ಬರಹದ ಕೊನೆ ನೋಡಿರಿ
ಅಚ್ಚ-ಕನ್ನಡ ಬರಹಗಾರರು

ಈವರೆಗೆ ನಮಗೆ ಗೊತ್ತಿರುವ ಅಚ್ಚ-ಕನ್ನಡದ ಬರಹಗಾರರು ( ಅಂದರೆ ಬರೀ ಅಚ್ಚ-ಕನ್ನಡದಲ್ಲಿ ಬರೆದಿರುವವರು)
 1. ಆಂಡಯ್ಯ
 2. ಮುಳಿಯ ತಿಮ್ಮಪ್ಪಯ್ಯನವರು
 3. ಕೊಳಂಬೆ ಪುಟ್ಟಣ್ಣಗೌಡರು

ಆಂಡಯ್ಯ ( ೧೩ನೇ ನೂರೇಡು )

ಇವರು ಬರೆದಿರುವ 'ಕಬ್ಬಿಗರ ಕಾವನ್' ಅಚ್ಚ-ಕನ್ನಡದಲ್ಲಿ ಬಂದ ಮೊದಲನೆಯ ಕಬ್ಬ. ಇಲ್ಲಿ ಬರೀ ಅಚ್ಚ-ಕನ್ನಡ ಸದ್ದುಗಳನ್ನೇ ಇಲ್ಲವೆ ತದ್ಬವಗಳನ್ನು ಬಳಸಿ ಕಬ್ಬವನ್ನು ನೆಗೞ್ಚದ್ದಾರೆ.

ಆಂಡಯ್ಯನ ಅಜ್ಜನ ಹೆಸರು ಕೂಡ ಆಂಡಯ್ಯ. ಆಂಡಯ್ಯನ ಮಕ್ಕಳಾದ ಸಾಂತ, ಗುಮ್ಮಟ ಮತ್ತು ವೈಜಣರಲ್ಲಿ ಹಿರಿಯವನಾದ ಸಾಂತನ ಮಗನೆ ಆಂಡಯ್ಯ. ಈತನ ತಾಯಿ ಬಲ್ಲವ್ವೆ. ಇವನು ಹುಟ್ಟು-ಜಿನಿಗ.

ಇವನು ಪಂಪ, ರನ್ನ, ಅಗ್ಗಳ ಮತ್ತು ಜನ್ನನನ್ನು ತನ್ನ ಕಬ್ಬದಲ್ಲಿ ಹೊಗಳಿರುತ್ತಾನೆ. ಈತನಿಗೆ ಯಾವ ಅರಸನು ಇಂಬು ನೀಡಲಿಲ್ಲ.

ಸಕ್ಕದದ ನೆರವಿಲ್ಲದೆ ಕನ್ನಡದಲ್ಲಿ ಕಬ್ಬವನ್ನು ನೆಗೞ್ಚಲಾಗದೆಂದು ಆದುದರಿಂದಲೇ ಪಂಪ ಮೊದಲಾದ ಹೆಸರಾಂತ ಕಬ್ಬಿಗರು ಕನ್ನಡ-ಸಕ್ಕದ ಬೆರೆಸಿ ಕಬ್ಬವನ್ನು ಬರೆದರಂತೆ. ಇದನ್ನು ಕೆಲವರು ಹೀಗಳೆದರು. ಆಗ ಬರೀ ಕನ್ನಡದ ಒರೆಗಳನ್ನೇ ಬಳಸಿ ಕಬ್ಬವನ್ನು ಬರೆಯಬಹುದೆಂದು ತೋರಿಸಲು ಆಂಡಯ್ಯ 'ಕಬ್ಬಿಗರ ಕಾವನ್' ಬರೆದನೆಂದು ಹೇಳಲಾಗಿದೆ.

ಇದರಿಂದ 'ಬಲ್ಲವರು' ಇವನಿಗೆ 'ಕಬ್ಬಿಗರ ಕಾವ' ಅಂದ್ರೆ ಕಬ್ಬಿಗರನ್ನು ಕಾಪಾಡಿದವನು(Saviour of Poets) ಎಂಬ ಬಿರುದನ್ನು ಕೊಟ್ಟರು. ಇದಕ್ಕೆ 'ಕಾವನ ಗೆಲ್ಲ', ' ಸೊಬಗಿನ ಸುಗ್ಗಿ' ಎಂಬ ಹೆಸರುಗಳು ಕೂಡ ಇದೆ.

ಮಾದರಿ:
 1. ಎಳಗಿಳಿವಿಂಡು, ಮಿಳಿರ್ದಾಡುವ ಪೆಂಡಿರ ನೋಟ,
  ಪೂವಿನ ಪೊಸಗಂಪಿನೊಳ್
  ಪೊರೆದು ತೀಡುವ ತೆಂಬಲರ್
 2. ಸೊಗಯಿಸುವ ಕಬ್ಬಮಂ ಕ
  ಬ್ಬಿಗರಲ್ಲದೆ ಮೆಚ್ಚರುಱಿದರೇನಱುವರೆ? ತುಂ
  ಬಿಗಳಲ್ಲದೆ ಪೂವೊಳ್ ಮಗ
  ಮಗಿಸುವ ಕಂಪಂ ಕಡಂದುಱೋನಱುದಪುದೇ

ತಿಳಿವು/ತಿರುಳು: ಹೂವಿನ ಮಗಮಗಿಸುವ ಕಂಪು ಹೇಗೆ ಬರೀ ದುಂಬಿಗೆ ಗೊತ್ತೊ ಹಾಗೆ ಈ ನನ್ನ ಕಬ್ಬವನ್ನು ಸೊಗಸಾದ ಕಬ್ಬಿಗರಲ್ಲದೆ ಬೇರೆ ಯಾರು ಮೆಚ್ಚಲಾರರು.

ಮುಳಿಯ ತಿಮ್ಮಪ್ಪಯ್ಯನವರು ( ಸುಮಾರು ೧೯೦೦)

ಮುಳಿಯ ತಿಮ್ಮಪ್ಪಯ್ಯನವರು 'ಸೊಬಗಿನ ಬಳ್ಳಿ' ಎಂಬ ಕಬ್ಬವನ್ನು ತಿಳಿಗನ್ನಡದಲ್ಲಿ ನೆಗೞ್ಚಿದರು. ಅವರು 'ಕವಿರಾಜಮಾರ್ಗ ವಿವೇಕ' ಎಂಬ ಹೊತ್ತಿಗೆಯನ್ನು ಬೆಳಕಿಗೆ ತಂದರು. ಇದು ಕನ್ನಡದ ಹೆಮ್ಮೆಯ ರಟ್ಟಕೂಟ/ರಾಶ್ಟ್ರಕೂಟರು ಮತ್ತು 'ಕವಿರಾಜಮಾರ್ಗ'ದ ಬಗೆಗಿನ ತಿಳಿವೊಳಗೊಂಡ ಬರಹ.ಇವರು ಮಂಗಳೂರಿನ ಸಂತ ಅಲೋಸಿಯಸ್ ಕಾಲೇಜಿನಲ್ಲಿ ಕಲ್ಲಾಯ್ತರಾಗಿದ್ದವರು. ಇವರ ಬಗೆಗೆ ಹೆಚ್ಚಿನ ತಿಳಿವು ಸಿಕ್ಕಿಲ್ಲ.

ಕೊಳಂಬೆ ಪುಟ್ಟಣ್ಣಗೌಡರು.(ಕುವೆಂಪು ಹೊತ್ತಿನವರು)

ಕೊಳಂಬೆ ಪುಟ್ಟಣ್ಣಗೌಡರು 'ಕಾಲೂರ ಚೆಲುವೆ'ಎಂಬ ಅಚ್ಚ-ಕನ್ನಡ ಕಬ್ಬದಿಂದ ಹೆಸರುವಾಸಿಯಾದರು. ಆಂಡಯ್ಯನನ್ನು ಮರೆತವರಿಗೆ ಪುಟ್ಟಣ್ಣಗೌಡರು ಆತನನ್ನು,ಅತನ ಕಬ್ಬವನ್ನು ನೆನೆಯುವಂತೆ ಮಾಡಿದರು. ಆಂಡಯ್ಯನು ತನ್ನ ಕಬ್ಬದಲ್ಲಿ ಅಚ್ಚ-ಕನ್ನಡ ಒರೆಗಳು ಮತ್ತು ತದ್ಬವಗಳನ್ನು ಬಳಸಿದ್ದಾನೆ, ಆದರೆ ಪುಟ್ಟಣ್ಣನವರು ಒಂದು ಹೆಜ್ಜೆ ಮುಂದೆ ಹೋಗಿ ಬರೀ ಅಚ್ಚ-ಕನ್ನಡದ ಒರೆಗಳನ್ನೇ ಬಳಸಿದ್ದಾರೆ. ಇವರು ನಮ್ಮ 'ನಾಡಕಬ್ಬಿಗ'ರಾದ ಕುವೆಂಪುರವರ ಬೀಗರು ಮತ್ತು ಚಿದಾನಂದಗೌಡರ ತಂದೆ. ಇವರು ಮೊದಲ್ಗಬ್ಬಿಗ/ಆದಿಕವಿ ನಾಡೋಜ ಪಂಪನ ಕಬ್ಬಗಳನ್ನು, ಕೇಶಿರಾಜನ 'ಶಬ್ದಮಣಿದರ್ಪಣ'ವನ್ನು ಚೆನ್ನಾಗಿ ಕಲಿತಿದ್ದರು. ಇವರು ಹೊಸ ಅಚ್ಚ-ಕನ್ನಡ ಸದ್ದುಗಳನ್ನು/ಒರೆಗಳನ್ನು ಬಳಕೆಗೆ ತಂದರು.
ಮಾದರಿ : ಬಾನೋಡ(ವಿಮಾನ), ಮೇಲ್ನಲ(ಸ್ವರ್ಗ), ಬೆಟ್ಟಳಿಯ(ಶಿವ), ಮಬ್ಬಿಗ(ರಾಕ್ಶಸ), ಏರ್ವಣಿ(ಕುರ್ಚಿ), ನುಡಿವುರುಳು(ಶಬ್ದಸಂಪತ್ತು), ಕಲ್ಲಾಯ್ತ(ಉಪಾಧ್ಯಾಯ)

ಎಲ್ಲಬಲ್ಲಪ್ಪನ(ಸರ್ವ್ಞನ)ವಚನಗಳ ಮಾದರಿಯಲ್ಲಿ 'ತಿಳಿಗನ್ನಡ ನುಡಿವಣಿ'ಗಳನ್ನು ನೆಗೞ್ಚಿದರು.

ಒಂದು ಮಾದರಿ:
ನಾಡೆಂದರೇಂ ಹುಗಿದಿಟ್ಟ ಬಾಳ್ಪುರುಳಂತೆ
ಹೊತ್ತೆಲ್ಲರೆಚ್ಚರದಿಂ ಕಾವುದಂತೆ
ತಿಳಿವಾಳ್ಕೆ ದುಡಿಮೆಗಳ್ ತಡೆವುವು ಹಗೆಗಳಂ
ಹೊಳೆ ಬೆಟ್ಟ ಕಡಲುಗಳ್ ತಡೆಯಲ್ಲವಂತೆ

ತಿಳಿವು/ತಿರುಳು: ನಾಡೆಂದರೆ ಹುಗಿದಿಟ್ಟ ಬಾಳಿನ ಸಿರಿಯಂತೆ, ಅದನ್ನು ಎಚ್ಚರದಿಂದ ಕಾಪಾಡಬೇಕು. ಹಗೆಗಳಿಗೆ ಹೊಳೆ,ಬೆಟ್ಟ ಮತ್ತು ಕಡಲುಗಳು ತಡೆಗಳಲ್ಲ. ನಾಡಿನ ಅರಿವು, ಆಳುವಿಕೆ ಮತ್ತು ಬೆವರು ಹರಿಸಿದ ದುಡಿಮೆಗಳೇ ತಡೆಗಳು.

ಇನಿತಿಗೆ ತಮ್ಮ ದುಡಿಮೆಯನ್ನು ಕೊನೆಗೊಳಿಸದೇ ಒಂದು ಹೆಜ್ಜೆ ಮುಂದೆ ಹೋಗಿ 'ಅಚ್ಚಗನ್ನಡ ನುಡಿಗಂಟ'ನ್ನು ಕೂಡ ಬೆಳಕಿಗೆ ತಂದರು. ಇಂದಿಗೂ ಅಚ್ಚ-ಕನ್ನಡ ಒರೆಗಳ ತಿಳಿವಳಿಕೆಗೆ ಇದು ದಾರಿದೀವಿಗೆಯಾಗಿದೆ.

ಒರೆಗಳ ತಿಳಿವು

ಒರೆ = ಪದ
ನೂರೇಡು = ಶತಮಾನ ( ಏಡು = ವರುಷ )
ನೆಗೞ್ಚು= ರಚಿಸು
ಹುಟ್ಟು-ಜಿನಿಗ=a jain by birth, ( ಜಿನಿಗ = a jain man )
ಕಲ್ಲಾಯ್ತ = ಉಪಾಧ್ಯಾಯ
ನುಡಿಗಂಟು = ಶಬ್ದಕೋಶ = dictionary
ನುಡಿವಣಿ = ನುಡಿಮಣಿಗಳು
ನಾಡಕಬ್ಬಿಗ= ರಾಷ್ಟ್ರಕವಿ

Friday, July 20, 2007

ಕನ್ನಡದಲ್ಲಿ 'ಇಸು'ವಿನ ಬಳಕೆ

ಕನ್ನಡದಲ್ಲಿ 'ಇಸು'ವಿನ ಬಳಕೆ

ಕನ್ನಡದಲ್ಲಿ 'ಇಸು' ವಿನ ಬಳಕೆ ಹೀಗಿದೆ,

ಮಾಡು - ತಾನು ಮಾಡುವುದು.
ಮಾದರಿ: ಅವನು ಕೆಲಸ ಮಾಡಿದನು

ಮಾಡಿಸು - ಎರಡನೆಯವನು ಮಾಡುವಂತೆ ಮಾಡುವುದು.
ಮಾದರಿ: ಅವನು ತಿಮ್ಮನಿಂದ ಮಾಡಿಸಿದನು

ಮಾಡಿಸಿಸು - ಎರಡನೆಯವನು ಮೂರನೆಯವರಿಂದ ಮಾಡಿಸುವಂತೆ ಮಾಡುವುದು.
ಮಾದರಿ: ಅವನು ತಿಮ್ಮನಿಗೆ ಹೇಳಿ, ನಿಂಗನಿಂದ ಮಾಡಿಸಿಸಿದನು

ಇದರಿಂದ ನಮಗೆ ಮೂರು ಹೆಸರುಪದಳು ಸಿಗುತ್ತವೆ. ಮಾಡುವಿಕೆ,ಮಾಡಿಸುವಿಕೆ,ಮಾಡಿಸಿಸುವಿಕೆ.

ಹಾಗೆಯೇ,
ಕೇಳು, ಕೇಳಿಸು, ಕೇಳಿಸಿಸು
ತೋರು, ತೋರಿಸು, ತೋರಿಸಿಸು
ಹಾಡು, ಹಾಡಿಸು, ಹಾಡಿಸಿಸು
ಮಾರ್ಪಡು, ಮಾರ್ಪಡಿಸು, ಮಾರ್ಪಡಿಸಿಸು
'ಪ್ರಶ್ನೆ' ಈ ಒರೆಯು ಸಕ್ಕದದ 'ಪ್ರಶ್ನಾ' ದಿಂದ ಬಂದದ್ದು. ಇದಕ್ಕೆ ಇಸು ಸೇರಿಸಿ 'ಪ್ರಶ್ನಿಸು' ಮಾಡಿದ್ದೇವೆ.
ಕೇಳು - ಪ್ರಶ್ನೆ ಮಾಡು - ಪ್ರಶ್ನಿಸು
ಕೇಳಿಸು - ಪ್ರಶ್ನಿಸಿಸು.
ಕೇಳಿಸಿಸು - ?
ಹೀಗೆ ಸಕ್ಕದದ ಒರೆಗಳಿಗೆ 'ಇಸು' ಸೇರಿಸಿ ಕನ್ನಡಕ್ಕೆ ತರುವುದಿಂದ ಕನ್ನಡದಲ್ಲಿ ಹಲವು ಗೊಂದಲಗಳು ಆಗಿವೆ. ಅದಕ್ಕಾಗಿ ಆದನಿತ್ತು ಕಡಮೆ ಇಂತಹ ಒರೆಗಳನ್ನು ಬಳಸಬೇಕು.

Thursday, July 19, 2007

ಅಚ್ಚ-ಕನ್ನಡದಲ್ಲಿ ಒರೆಗೂಡಿಕೆ ಕಟ್ಟಳೆಗಳು

*ಓದಲು ನೆರವಿಗೆ ಬರಹದ ಕೊನೆ ನೋಡಿರಿ

ಅಚ್ಚ-ಕನ್ನಡದಲ್ಲಿ ಒರೆಗೂಡಿಕೆ ಕಟ್ಟಳೆಗಳು

ಒರೆಗೂಡಿಕೆ ಅಂದರೆ ಎರಡು ಒರೆಗಳನ್ನು ಕೂಡಿಸಿ/ಸೇರಿಸಿ ಉಲಿಯುವ ಕೆಲಸ. ಹೀಗೆ ಒರೆಗಳನ್ನು ಕೂಡಿಸಿದಾಗ ಕೆಲವು ಮಾರ್ಪಾಟುಗಳ ಆಗುವುವು.

ಈ ಒರೆಗೂಡಿಕೆಯನ್ನು ಮುನ್ನೊರೆಯು ಯಾವ ಅಕ್ಕರದಿಂದ ಕೊನೆಯಾಗುವುದು, ಮತ್ತು ಹಿನ್ನೊರೆಯು ಯಾವ ಅಕ್ಕರದಿಂದ ಮೊದಲಾಗುವುದು ಎನ್ನುವುದರ ಮೇಲೆ
೧) ಸೊರಗೂಡಿಕೆ - ಎರಡು ಸೊರಗಳು ಕೂಡುವುದು
೨) ಬೆಂಜಣಗೂಡಿಕೆ - ಎರಡು ಬೆಂಜಣಗಳು ಕೂಡುವುದು
ಎಂದು ಎರಡು ಬಗೆ ಮಾಡಬಹುದು.

ಸೊರಗೂಡಿಕೆ
ಕನ್ನಡದಲ್ಲಿ ಯಾವಾಗಲೂ ಒರೆಗೂಡಿಕೆಯಲ್ಲಿ ಮೊನ್ನೊರೆಯ ಕೊನೆಯ ಸೊರ ಕಾಣೆಯಾಗುವುದು.

ಅಂದು + ಎನಗೆ = ಅಂದೆನಗೆ
ಈಗ + ಈಗ = ಈಗೀಗ
ಅಲ್ಲಿ + ಅಲ್ಲಿ = ಅಲ್ಲಲ್ಲಿ
ಇಲ್ಲಿ + ಇಲ್ಲಿ = ಇಲ್ಲಿಲ್ಲಿ

ಹೆಸರೊರೆಗಳು ಸೇರಿಸುವಾಗ ಮೊದಲು ಹೆಸರೊರೆಯನ್ನು ಒಂದನೇ ವಿಬಕುತಿಗೆ ತಂದು ಬಳಿಕ ಸೇರಿಸ ಬೇಕು.

ನಿಂಗ => ನಿಂಗನು/ನಿಂಗರು
ನಿಂಗರು + ಅಲ್ಲಿ = ನಿಂಗರಲ್ಲಿ
ನಿಂಗನು + ಇಂದ = ನಿಂಗನಿಂದ

ಹೊಳೆ => ಹೊಳೆಯು/ಹೊಳೆಗಳು
ಹೊಳೆಯು + ಈಗ = ಹೊಳೆಯೀಗ
ಹೊಳೆಯು + ಅಂದು = ಹೊಳೆಯಂದು

ಹೀಗೆ. ( ತಪ್ಪುಗಳಿದ್ದರೆ ತಿಳಿಸಿರಿ )

ಬೆಂಜಣ ಕೂಡಿಕೆ
ಮುನ್ನೊರೆಯ ಕೊನೆಯಲ್ಲಿ, ಮತ್ತು ಹಿನ್ನೊರೆಯ ತುದಿಯಲ್ಲಿರುವ ಬೆಂಜಣಗಳ ಕೂಡಿಕೆ.

ಕಟ್ಟಳೆಗಳು
ಕ => ಗ,
ಹುರಿ + ಕಡಬು = ಹುರಿಗಡಬು
ಕೆನ್ + ಕಣ್ಣು = ಕೆಂಗಣ್ಣು ( ಇಲ್ಲಿ ನ್ => ೦ ಆಯಿತು )

ತ => ದ,
ಪುಲಿ + ತೊಗಲು = ಪುಲಿದೊಗಲು
ಕೆನ್ + ತಾವರೆ = ಕೆಂದಾವರೆ
ಬೆಟ್ಟ + ತಾವರೆ = ಬೆಟ್ಟದಾವರೆ

ಪ => ಬ,
ಎಣ್ + ಪತ್ತು = ಎಂಬತ್ತು ( ಣ್ => ೦ )
ತೊಂ + ಪತ್ತು = ತೊಂಬತ್ತು

ಪ,ಬ,ಮ => ವ
ನುಡಿ + ಮಣಿ = ನುಡಿವಣಿ
ಮುಂದು + ಪರಿ = ಮುಂದುವರಿ
ನನೆ + ಬಿಲ್ಲ = ನನೆವಿಲ್ಲ

ಸ => ಚ
ಇನ್ + ಸರ = ಇಂಚರ

ಡ => ೞ
ಮಾಡ್ + ಪುದು => ಮಾೞ್ಪುದು
ನೋಡ್ + ಪುದು => ನೋೞ್ಪುದು

=====================================================
ಒರೆ = ಪದ, word
ಒರೆಗೂಡಿಕೆ = ಪದಸಂಧಿ
ಹೆಸರೊರೆ = ನಾಮಪದ, noun
ಕೆಲಸದೊರೆ = ಕ್ರಿಯಾಪದ, verb
ಮಾರ್ಪು/ಮಾರ್ಪಾಟು = ಬದಲಾವಣೆ, ವ್ಯತ್ಯಾಸ
ಉಲಿ, ನುಡಿ, ಸೊಲ್ಲು = pronounce, ಉಚ್ಚಾರ ಮಾಡು
ಮೊನ್ನೊರೆ( ಮುನ್ + ಒರೆ ) = ಮುಂದಿನ ಒರೆ
ಹಿನ್ನೊರೆ ( ಹಿನ್ + ಒರೆ ) = ಹಿಂದಿನ ಒರೆ
ಸೊರ = ಸ್ವರ
ಅಕ್ಕರ = ಅಕ್ಷರ
ವಿಬಕುತಿ = ವಿಭಕ್ತಿ
ಬೆಂಜಣ = ವ್ಯಂಜನ
Wednesday, July 18, 2007

ಅಚ್ಚ-ಕನ್ನಡ ಎಂದರೇನು?

*ಅರ್ಥಗಳಿಗೆ ಬರಹದ ಕೊನೆ ನೋಡಿ
ಅಚ್ಚ-ಕನ್ನಡ ಎಂದರೇನು?
ಅಚ್ಚ-ಕನ್ನಡ ಎಂದರೆ ಬರೀ ಕನ್ನಡದ್ದೇ ಒರೆಗಳನ್ನು ಹೊಂದಿರುವ ಕನ್ನಡ. ಅಂದರೆ ಈ ಕನ್ನಡದಲ್ಲಿ ಸಕ್ಕದ, ಪಾಗದ, ಇಂಗಲೀಸು, ಉರ್ದು, ಪೋರುಚುಗೀಸು, ಮರಾಟಿ, ಮುಂತಾದ ಹೊರನುಡಿಗಳ ಒರೆಗಳು ಇರುವುದಿಲ್ಲ. ಇದು ನೂರಕ್ಕೆ ನೂರರನಿತ್ತು ಕನ್ನಡದ್ದೇ ಆದ ಒರೆಗಳನ್ನು ಹೊಂದಿರುವಂತದ್ದು. ಕನ್ನಡದಲ್ಲಿ ಇರದ ಸರಕುಗಳಿಗೆ ಒರೆಗಳನ್ನು ಪಡೆಯುವಾಗ ಅಂತವನ್ನು ಕನ್ನಡಯಿಸಿ, ಅಂದರೆ ಕನ್ನಡದ ಸೊಗಡಿಗೆ ಹೊಂದುವಂತೆ ಮಾರ್ಪಡಿಸಿ ಬಳಸಲಾಗುವುದು. ಮಾದರಿ ಇಂಗ್ಲೀಶ್ => ಇಂಗಲೀಸು.

ಅಚ್ಚ-ಕನ್ನಡದ ಹಿರಿಮೆ
ಬಲು ಹಿಂದಿನ ಹೊತ್ತಿನಿಂದಲೂ ಈ ’ಅಚ್ಚ-ಕನ್ನಡ’ದ ಕಬ್ಬಗಳು ನೆಗೞು ನಡೆಯುತ್ತಿದ್ದವು, ಈಗಲೂ ಕೆಲವರು ನಡೆಸುತ್ತಿದ್ದಾರೆ. ಇದಕ್ಕೆ ಮಾದರಿಯಾಗಿ ಅಂಡಯ್ಯ(ಕಬ್ಬಿಗರ ಕಾವ), ನಯಸೇನರಂತೆ ಹಳೆಯ ಕಬ್ಬಿಗರೂ, ಮತ್ತೂ ಇಪ್ಪತ್ತನೇ ನೂರೇಡಲ್ಲಿ ಕೊಳಂಬೆ ಪುಟ್ಟಣ್ಣ ಗೌಡರು ಮುಂತಾದವರು ಇದಕ್ಕೆ ದುಡಿದವರು.

ಅಚ್ಚ-ಕನ್ನಡ ಏಕೆ ಕಾಣಿಸಲ್ಲ?
ಇಂದಿನ ಕನ್ನಡದಲ್ಲಿ ಹೇರಳವಾಗಿ ಸಕ್ಕದ ಮುಂತಾದ ಹೊರನುಡಿಗಳ ಒರೆಗಳು ಬರೆತು ಹೋಗಿದ್ದು, ಅಚ್ಚ-ಕನ್ನಡವನ್ನು ಓದಲುಮ ಬರೆಯಲು ಹಲವರಿಗೆ ಎಡೆರಿದೆ. ಕನ್ನಡಕ್ಕೆ ಸಕ್ಕದ, ಪಾಗದದ ಒರೆಗಳ ಬೆರಕೆ ಬಲು ಹಿಂದಿನಿಂದಲೂ ಆಗುತ್ತಾ ಬಂದಿದ್ದು, ಹಲವು ಸಕ್ಕದ, ಪಾಗದದ ಒರೆಗಳೂ ಕನ್ನಡದ್ದೇ ಎನ್ನುವ ಮಟ್ಟಿಗೆ ಬಳಕೆಯಲ್ಲಿವೆ. ಆದುದರಿಂದ ಹೆಚ್ಚೆಡೆ ನಾವು ಕಾಣುವ ಕನ್ನಡ ಅಪ್ಪಟವಲ್ಲ, ಅದು ಬೆರಕೆ.

ಅಚ್ಚ-ಕನ್ನಡ ಸೊಗಡು
ಅಚ್ಚ-ಕನ್ನಡದಲ್ಲಿ ಮೊದಲಲ್ಲೇ ಹೇಳಿದಂತೆ, ಬರೀ ಕನ್ನಡದ್ದೇ ಆದ ಒರೆಗಳ ಬಳಕೆ ಇರಬೇಕು. ಕನ್ನಡದಲ್ಲಿ ಒರೆ ಇರದಿದ್ದರೆ, ಆಗ ಕನ್ನಡಕ್ಕೆ ತರುವಾಗ ಅದನ್ನು ಕನ್ನಡಯಿಸಬೇಕು, ಅಂದರೆ ಕನ್ನಡದ ಸೊಗಡಿಗೆ ಹೊಂದಿಸಬೇಕು.
ಅಚ್ಚಕನ್ನಡದಲ್ಲಿ ಬರೀ ಕೆಳಗಿನ ಅಕ್ಕರಗಳು ಇವೆ
ಅ ಆ ಇ ಈ ಉ ಊ ಎ ಏ ಒ ಓ ಅಂ ( ಋ, ೠ, ಅಃ ಇಲ್ಲ, ಐ = ಅಯ್, ಔ = ಅವ್ )
ಕ ಗ
ಚ ಜ
ಟ ಡ ಣ
ತ ದ ನ
ಪ ಬ ಮ
(ಮಹಾಪ್ರಾಣಗಳಿಲ್ಲ)
ಯ ರ ಱ ಲ ವ ಸ ಹ ಳ ೞ
ಒಟ್ಟು ಮುವ್ವತ್ತಮೂರು ಅಕ್ಕರಗಳು.

ೞ = ಳ( ಹತ್ತಿರದ ಸದ್ದು ) ( ಕುೞಿತು, ಕೊೞೆತು, ಹೞತು )
ಱ = ರ( ಹತ್ತಿರದ ಸದ್ದು ) ( ಕುಱಿತು, ಅಱಿತು )

ಮುಂದುವರಿಯುವುದು.....


ಕನ್ನಡಹೊರನುಡಿ
ಒರೆಶಬ್ದ, word
ಸಕ್ಕದಸಂಸ್ಕೃತ, Sanskrit
ಪಾಗದಪಾಕೃತ, Prakrit
ಅನಿತ್ತುಅಷ್ಟು, that much
ಸರಕುವಸ್ತು, thing
ಕಬ್ಬಸಾಹಿತ್ಯ, literature
ಕಬ್ಬಿಗಸಾಹಿತಿ, poet
ನೂರೇಡು (ನೂರು ಏಡು)ನೂರು ವರುಷ, ಶತಮಾನ, century
ಹೇರಳಅಧಿಕ, ಬಹು, ಅತಿ, great amount
ಎಡರುಕಷ್ಟ, problem
ನೆಗೞು, ನೆಗೞ್ಚುರಚನೆ, compose
ಅಕ್ಕರ(ತದ್ಭವ)ಅಕ್ಷರ