*ನೆರವಿಗಾಗಿ ಬರಹದ ಕೊನೆ ನೋಡಿರಿ
ಅಚ್ಚ-ಕನ್ನಡ ಬರಹಗಾರರು ಈವರೆಗೆ ನಮಗೆ ಗೊತ್ತಿರುವ ಅಚ್ಚ-ಕನ್ನಡದ ಬರಹಗಾರರು ( ಅಂದರೆ ಬರೀ ಅಚ್ಚ-ಕನ್ನಡದಲ್ಲಿ ಬರೆದಿರುವವರು)
- ಆಂಡಯ್ಯ
- ಮುಳಿಯ ತಿಮ್ಮಪ್ಪಯ್ಯನವರು
- ಕೊಳಂಬೆ ಪುಟ್ಟಣ್ಣಗೌಡರು
ಆಂಡಯ್ಯ ( ೧೩ನೇ ನೂರೇಡು )ಇವರು ಬರೆದಿರುವ 'ಕಬ್ಬಿಗರ ಕಾವನ್' ಅಚ್ಚ-ಕನ್ನಡದಲ್ಲಿ ಬಂದ ಮೊದಲನೆಯ ಕಬ್ಬ. ಇಲ್ಲಿ ಬರೀ ಅಚ್ಚ-ಕನ್ನಡ ಸದ್ದುಗಳನ್ನೇ ಇಲ್ಲವೆ ತದ್ಬವಗಳನ್ನು ಬಳಸಿ ಕಬ್ಬವನ್ನು ನೆಗೞ್ಚದ್ದಾರೆ.
ಆಂಡಯ್ಯನ ಅಜ್ಜನ ಹೆಸರು ಕೂಡ ಆಂಡಯ್ಯ. ಆಂಡಯ್ಯನ ಮಕ್ಕಳಾದ ಸಾಂತ, ಗುಮ್ಮಟ ಮತ್ತು ವೈಜಣರಲ್ಲಿ ಹಿರಿಯವನಾದ ಸಾಂತನ ಮಗನೆ ಆಂಡಯ್ಯ. ಈತನ ತಾಯಿ ಬಲ್ಲವ್ವೆ. ಇವನು ಹುಟ್ಟು-ಜಿನಿಗ.
ಇವನು ಪಂಪ, ರನ್ನ, ಅಗ್ಗಳ ಮತ್ತು ಜನ್ನನನ್ನು ತನ್ನ ಕಬ್ಬದಲ್ಲಿ ಹೊಗಳಿರುತ್ತಾನೆ. ಈತನಿಗೆ ಯಾವ ಅರಸನು ಇಂಬು ನೀಡಲಿಲ್ಲ.
ಸಕ್ಕದದ ನೆರವಿಲ್ಲದೆ ಕನ್ನಡದಲ್ಲಿ ಕಬ್ಬವನ್ನು ನೆಗೞ್ಚಲಾಗದೆಂದು ಆದುದರಿಂದಲೇ ಪಂಪ ಮೊದಲಾದ ಹೆಸರಾಂತ ಕಬ್ಬಿಗರು ಕನ್ನಡ-ಸಕ್ಕದ ಬೆರೆಸಿ ಕಬ್ಬವನ್ನು ಬರೆದರಂತೆ. ಇದನ್ನು ಕೆಲವರು ಹೀಗಳೆದರು. ಆಗ ಬರೀ ಕನ್ನಡದ ಒರೆಗಳನ್ನೇ ಬಳಸಿ ಕಬ್ಬವನ್ನು ಬರೆಯಬಹುದೆಂದು ತೋರಿಸಲು ಆಂಡಯ್ಯ 'ಕಬ್ಬಿಗರ ಕಾವನ್' ಬರೆದನೆಂದು ಹೇಳಲಾಗಿದೆ.
ಇದರಿಂದ 'ಬಲ್ಲವರು' ಇವನಿಗೆ 'ಕಬ್ಬಿಗರ ಕಾವ' ಅಂದ್ರೆ ಕಬ್ಬಿಗರನ್ನು ಕಾಪಾಡಿದವನು(Saviour of Poets) ಎಂಬ ಬಿರುದನ್ನು ಕೊಟ್ಟರು. ಇದಕ್ಕೆ 'ಕಾವನ ಗೆಲ್ಲ', ' ಸೊಬಗಿನ ಸುಗ್ಗಿ' ಎಂಬ ಹೆಸರುಗಳು ಕೂಡ ಇದೆ.
ಮಾದರಿ:
ಎಳಗಿಳಿವಿಂಡು, ಮಿಳಿರ್ದಾಡುವ ಪೆಂಡಿರ ನೋಟ,
ಪೂವಿನ ಪೊಸಗಂಪಿನೊಳ್
ಪೊರೆದು ತೀಡುವ ತೆಂಬಲರ್ಸೊಗಯಿಸುವ ಕಬ್ಬಮಂ ಕ
ಬ್ಬಿಗರಲ್ಲದೆ ಮೆಚ್ಚರುಱಿದರೇನಱುವರೆ? ತುಂ
ಬಿಗಳಲ್ಲದೆ ಪೂವೊಳ್ ಮಗ
ಮಗಿಸುವ ಕಂಪಂ ಕಡಂದುಱೋನಱುದಪುದೇ
ತಿಳಿವು/ತಿರುಳು: ಹೂವಿನ ಮಗಮಗಿಸುವ ಕಂಪು ಹೇಗೆ ಬರೀ ದುಂಬಿಗೆ ಗೊತ್ತೊ ಹಾಗೆ ಈ ನನ್ನ ಕಬ್ಬವನ್ನು ಸೊಗಸಾದ ಕಬ್ಬಿಗರಲ್ಲದೆ ಬೇರೆ ಯಾರು ಮೆಚ್ಚಲಾರರು.
ಮುಳಿಯ ತಿಮ್ಮಪ್ಪಯ್ಯನವರು ( ಸುಮಾರು ೧೯೦೦)
ಮುಳಿಯ ತಿಮ್ಮಪ್ಪಯ್ಯನವರು 'ಸೊಬಗಿನ ಬಳ್ಳಿ' ಎಂಬ ಕಬ್ಬವನ್ನು ತಿಳಿಗನ್ನಡದಲ್ಲಿ ನೆಗೞ್ಚಿದರು. ಅವರು 'ಕವಿರಾಜಮಾರ್ಗ ವಿವೇಕ' ಎಂಬ ಹೊತ್ತಿಗೆಯನ್ನು ಬೆಳಕಿಗೆ ತಂದರು. ಇದು ಕನ್ನಡದ ಹೆಮ್ಮೆಯ ರಟ್ಟಕೂಟ/ರಾಶ್ಟ್ರಕೂಟರು ಮತ್ತು 'ಕವಿರಾಜಮಾರ್ಗ'ದ ಬಗೆಗಿನ ತಿಳಿವೊಳಗೊಂಡ ಬರಹ.ಇವರು ಮಂಗಳೂರಿನ ಸಂತ ಅಲೋಸಿಯಸ್ ಕಾಲೇಜಿನಲ್ಲಿ ಕಲ್ಲಾಯ್ತರಾಗಿದ್ದವರು. ಇವರ ಬಗೆಗೆ ಹೆಚ್ಚಿನ ತಿಳಿವು ಸಿಕ್ಕಿಲ್ಲ.
ಕೊಳಂಬೆ ಪುಟ್ಟಣ್ಣಗೌಡರು.(ಕುವೆಂಪು ಹೊತ್ತಿನವರು)
ಕೊಳಂಬೆ ಪುಟ್ಟಣ್ಣಗೌಡರು 'ಕಾಲೂರ ಚೆಲುವೆ'ಎಂಬ ಅಚ್ಚ-ಕನ್ನಡ ಕಬ್ಬದಿಂದ ಹೆಸರುವಾಸಿಯಾದರು. ಆಂಡಯ್ಯನನ್ನು ಮರೆತವರಿಗೆ ಪುಟ್ಟಣ್ಣಗೌಡರು ಆತನನ್ನು,ಅತನ ಕಬ್ಬವನ್ನು ನೆನೆಯುವಂತೆ ಮಾಡಿದರು. ಆಂಡಯ್ಯನು ತನ್ನ ಕಬ್ಬದಲ್ಲಿ ಅಚ್ಚ-ಕನ್ನಡ ಒರೆಗಳು ಮತ್ತು ತದ್ಬವಗಳನ್ನು ಬಳಸಿದ್ದಾನೆ, ಆದರೆ ಪುಟ್ಟಣ್ಣನವರು ಒಂದು ಹೆಜ್ಜೆ ಮುಂದೆ ಹೋಗಿ ಬರೀ ಅಚ್ಚ-ಕನ್ನಡದ ಒರೆಗಳನ್ನೇ ಬಳಸಿದ್ದಾರೆ. ಇವರು ನಮ್ಮ 'ನಾಡಕಬ್ಬಿಗ'ರಾದ ಕುವೆಂಪುರವರ ಬೀಗರು ಮತ್ತು ಚಿದಾನಂದಗೌಡರ ತಂದೆ. ಇವರು ಮೊದಲ್ಗಬ್ಬಿಗ/ಆದಿಕವಿ ನಾಡೋಜ ಪಂಪನ ಕಬ್ಬಗಳನ್ನು, ಕೇಶಿರಾಜನ 'ಶಬ್ದಮಣಿದರ್ಪಣ'ವನ್ನು ಚೆನ್ನಾಗಿ ಕಲಿತಿದ್ದರು. ಇವರು ಹೊಸ ಅಚ್ಚ-ಕನ್ನಡ ಸದ್ದುಗಳನ್ನು/ಒರೆಗಳನ್ನು ಬಳಕೆಗೆ ತಂದರು.
ಮಾದರಿ : ಬಾನೋಡ(ವಿಮಾನ), ಮೇಲ್ನಲ(ಸ್ವರ್ಗ), ಬೆಟ್ಟಳಿಯ(ಶಿವ), ಮಬ್ಬಿಗ(ರಾಕ್ಶಸ), ಏರ್ವಣಿ(ಕುರ್ಚಿ), ನುಡಿವುರುಳು(ಶಬ್ದಸಂಪತ್ತು), ಕಲ್ಲಾಯ್ತ(ಉಪಾಧ್ಯಾಯ)
ಎಲ್ಲಬಲ್ಲಪ್ಪನ(ಸರ್ವ್ಞನ)ವಚನಗಳ ಮಾದರಿಯಲ್ಲಿ 'ತಿಳಿಗನ್ನಡ ನುಡಿವಣಿ'ಗಳನ್ನು ನೆಗೞ್ಚಿದರು.
ಒಂದು ಮಾದರಿ:
ನಾಡೆಂದರೇಂ ಹುಗಿದಿಟ್ಟ ಬಾಳ್ಪುರುಳಂತೆ
ಹೊತ್ತೆಲ್ಲರೆಚ್ಚರದಿಂ ಕಾವುದಂತೆ
ತಿಳಿವಾಳ್ಕೆ ದುಡಿಮೆಗಳ್ ತಡೆವುವು ಹಗೆಗಳಂ
ಹೊಳೆ ಬೆಟ್ಟ ಕಡಲುಗಳ್ ತಡೆಯಲ್ಲವಂತೆ
ತಿಳಿವು/ತಿರುಳು: ನಾಡೆಂದರೆ ಹುಗಿದಿಟ್ಟ ಬಾಳಿನ ಸಿರಿಯಂತೆ, ಅದನ್ನು ಎಚ್ಚರದಿಂದ ಕಾಪಾಡಬೇಕು. ಹಗೆಗಳಿಗೆ ಹೊಳೆ,ಬೆಟ್ಟ ಮತ್ತು ಕಡಲುಗಳು ತಡೆಗಳಲ್ಲ. ನಾಡಿನ ಅರಿವು, ಆಳುವಿಕೆ ಮತ್ತು ಬೆವರು ಹರಿಸಿದ ದುಡಿಮೆಗಳೇ ತಡೆಗಳು.
ಇನಿತಿಗೆ ತಮ್ಮ ದುಡಿಮೆಯನ್ನು ಕೊನೆಗೊಳಿಸದೇ ಒಂದು ಹೆಜ್ಜೆ ಮುಂದೆ ಹೋಗಿ 'ಅಚ್ಚಗನ್ನಡ ನುಡಿಗಂಟ'ನ್ನು ಕೂಡ ಬೆಳಕಿಗೆ ತಂದರು. ಇಂದಿಗೂ ಅಚ್ಚ-ಕನ್ನಡ ಒರೆಗಳ ತಿಳಿವಳಿಕೆಗೆ ಇದು ದಾರಿದೀವಿಗೆಯಾಗಿದೆ.
ಒರೆಗಳ ತಿಳಿವು
ಒರೆ = ಪದ
ನೂರೇಡು = ಶತಮಾನ ( ಏಡು = ವರುಷ )
ನೆಗೞ್ಚು= ರಚಿಸು
ಹುಟ್ಟು-ಜಿನಿಗ=a jain by birth, ( ಜಿನಿಗ = a jain man )
ಕಲ್ಲಾಯ್ತ = ಉಪಾಧ್ಯಾಯ
ನುಡಿಗಂಟು = ಶಬ್ದಕೋಶ = dictionary
ನುಡಿವಣಿ = ನುಡಿಮಣಿಗಳು
ನಾಡಕಬ್ಬಿಗ= ರಾಷ್ಟ್ರಕವಿ
2 comments:
"ನಾಡೆಂದರೇಂ ಹುಗಿದಿಟ್ಟ ಬಾಳ್ಪುರುಳಂತೆ
ಹೊತ್ತೆಲ್ಲರೆಚ್ಚರದಿಂ ಕಾವುದಂತೆ
ತಿಳಿವಾಳ್ಕೆ ದುಡಿಮೆಗಳ್ ತಡೆವುವು ಹಗೆಗಳಂ
ಹೊಳೆ ಬೆಟ್ಟ ಕಡಲುಗಳ್ ತಡೆಯಲ್ಲವಂತೆ"
ತುಂಬಾ ಒಳ್ಳೇ ತಿಳಿವಿದೆ ಇದರಲ್ಲಿ.
ನಾಡೆಂದರೆ ಹುದಿಗಿಟ್ಟ ಬಾಳ್ವುರುಳು
ನಾಡು ಹುದಿಗಿಟ್ಟ ಬಾಳ ಸಿರಿ
ಹೊತ್ತೆಲ್ಲರೆಚ್ಚರದಿಂ ಕಾವುದು
ನಾಡು, ನಾಡಿಗರನ್ನು(ಮಂದಿಯನ್ನು) ಹೊತ್ತು ಕಾಯುವದು
ತಿಳಿವಾಳ್ಕೆ ದುಡಿಮೆಗಳ್ ತಡೆವುವು ಹಗೆಗಳಂ
ಅಂದರೆ ತಿಳಿವು ಹೇಳುವ ನುಡಿವಣಿಗಳು, ಮಾತುಗಳು, ಗಾದೆಗಳು, ವಚನಗಳು ಇಂತವು, ಮಂದಿಯಲ್ಲಿ ಉಂಟಾಗುವ ಜಗಳಗಳನ್ನು ತಡೆಯುತ್ತವೆ.
ಹೊಳೆ,ಬೆಟ್ಟ, ಕಡಲುಗಳು ತಡೆಗಳಲ್ಲ
ಹೌದು, ಹೊಳೆ,ಬೆಟ್ಟ,ಕಡಲುಗಳು ಕೊಂಚ ಮಟ್ಟಿಗೆ ತಡೆ ನೀಡುತ್ತವಾದರೂ, ಮಂದಿಯ ನಡುವೆ ಹಗೆ ಬೆಳೆಯದಂತೆ ಅವು ಹೇಗೆ ತಡೆದಾವು?
ಅಂದರೆ ಬರಹಗಾರ ಇಲ್ಲಿ ನುಡಿಯ ಮುಮ್ಮೊದಲಿಕೆಯ (importance) ಬಗ್ಗೆ ಹೇಳಲು ಉಂಕಿಸಿದ್ದಾರೆ.
ಉಂಕಿಸು - ಪ್ರಯತ್ನಿಸು
ನಿಮ್ಮ ಬರಹ ನೋಡಿ ತುಂಬಾ ನಲಿವಿನ ಜೊತೆಗೆ ನೆಚ್ಚಿಕೆ ಆಯಿತು.
ವಾರ್ತೆ, ಸಮಾಚಾರ, ಸುದ್ದಿ, ದಿನಪತ್ರಿಕೆಗೆ ಬದಲಿ ಅಚ್ಚಕನ್ನಡ ಪದಗಳೇನು? ಈ ಹೆಡ್ಡನಿಗೆ ತಿಳಿಸಿ
ಕುಮಾರಸ್ವಾಮಿ.ಕಡಾಕೊಳ್ಳ
ಪುಣೆ
Post a Comment